ADVERTISEMENT

‘ಹಿಂದಿಗಿಂತಲೂ ಅಂಬೇಡ್ಕರ್‌ ಪ್ರಸ್ತುತತೆ ಇಂದು ಅಗತ್ಯ’

‘ಒಂದು ವೇಳೆ ಬಾಬಾಸಾಹೇಬರು ಇರದಿದ್ದರೆ’, ‘ಅಂಬೇಡ್ಕರ್‌ ಸ್ಮೃತಿ– ಸಂಸ್ಮೃತಿ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:19 IST
Last Updated 26 ಡಿಸೆಂಬರ್ 2025, 6:19 IST
ಕಲಬುರಗಿಯ ಕನ್ನಡ ಭವನದಲ್ಲಿ ಗುರುವಾರ ಚಿಂತಕ ಹರ್ಷಕುಮಾರ್‌ ಕುಗ್ವೆ, ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ, ಪ್ರೊ. ಆರ್‌.ಕೆ ಹುಡಗಿ, ಪ್ರೊ. ಅಪ್ಪಗೆರೆ ಸೋಮಶೇಖರ್, ಬಿ.ಆರ್‌. ಬುದ್ಧಾ, ವಿಕ್ರಮ ವಿಸಾಜಿ, ದತ್ತಾತ್ರಯ ಇಕ್ಕಳಕಿ ಹಾಗೂ ಇತರರು ಪುಸ್ತಕಗಳನ್ನು ಬಿಡುಗಡೆ ಮಾಡಿದರು
ಕಲಬುರಗಿಯ ಕನ್ನಡ ಭವನದಲ್ಲಿ ಗುರುವಾರ ಚಿಂತಕ ಹರ್ಷಕುಮಾರ್‌ ಕುಗ್ವೆ, ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ, ಪ್ರೊ. ಆರ್‌.ಕೆ ಹುಡಗಿ, ಪ್ರೊ. ಅಪ್ಪಗೆರೆ ಸೋಮಶೇಖರ್, ಬಿ.ಆರ್‌. ಬುದ್ಧಾ, ವಿಕ್ರಮ ವಿಸಾಜಿ, ದತ್ತಾತ್ರಯ ಇಕ್ಕಳಕಿ ಹಾಗೂ ಇತರರು ಪುಸ್ತಕಗಳನ್ನು ಬಿಡುಗಡೆ ಮಾಡಿದರು   

ಕಲಬುರಗಿ: ‘ಹಿಂದಿಗಿಂತಲೂ ಇಂದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರಸ್ತುತತೆ ಅಗತ್ಯವಾಗಿರುವ ಕಾರಣ ಅವರ ಬಗ್ಗೆ ಹೆಚ್ಚಿನ ಪುಸ್ತಕಗಳು ದೇಶದಲ್ಲಿ ಪ್ರಕಟವಾಗುತ್ತಿವೆ’ ಎಂದು ಚಿಂತಕ ಹರ್ಷಕುಮಾರ್ ಕುಗ್ವೆ ಹೇಳಿದರು.

ಇಲ್ಲಿನ ಕನ್ನಡ ಭವನದಲ್ಲಿ ಗುರುವಾರ ಸುಮೇಧ ಪ್ರಕಾಶನ ವತಿಯಿಂದ ಹಮ್ಮಿಕೊಂಡ ಅನುವಾದಿತ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

‘ತಳ ಸಮುದಾಯದ ಜನರು ಉನ್ನತ ಹುದ್ದೆ ಪಡೆಯಬೇಕು ಎಂಬುದು ಅಂಬೇಡ್ಕರ್‌ ಆಶಯವಾಗಿತ್ತು. ಸಂವಿಧಾನ ಇರುವುದರಿಂದಲೇ ಹಕ್ಕುಗಳು ಪಡೆಯಲು ಸಾಧ್ಯವಾಗುತ್ತಿದೆ. ಆದರೂ ಕೆಲವು ಕಡೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ದೇಶದಲ್ಲಿ ಮಲಹೊರುವ ಪದ್ಧತಿ ಜಾರಿಯಲ್ಲಿದೆ. ಇದು ಬದಲಾಗಬೇಕಾದ ಅನಿವಾರ್ಯತೆ ಇದೆ’ ಎಂದರು.

ADVERTISEMENT

‌ಅಂಬೇಡ್ಕರ್‌ ಪದವಿ ಕಾಲೇಜಿನ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಿಗಿ ಮಾತನಾಡಿ, ‘ಅಂಬೇಡ್ಕರ್‌ ಅವರು ದೊಡ್ಡ ತತ್ವಜ್ಞಾನಿಯಾಗಿದ್ದರಿಂದ ವಿಶ್ವದೆಲ್ಲೆಡೆ ಅವರ ಚಿಂತನೆಗಳು ಪ್ರಸಾರವಾಗುತ್ತಿವೆ. ಬೇರೆ ದೇಶಗಳಲ್ಲಿಯೂ ಅವರ ಬಗ್ಗೆ ಓದುಗರ ಸಂಖ್ಯೆ ಹೆಚ್ಚಾಗಿದೆ’ ಎಂದರು.

‌‘ತಳ ಸಮುದಾಯದ ಜನರು ಸಂವಿಧಾನ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಉನ್ನತ ಮಟ್ಟಕ್ಕೆ ಹೋಗಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಅವರು ಅಂಬೇಡ್ಕರ್‌ ತತ್ವಗಳನ್ನು ಬೇರೆ ದೇಶಗಳಿಗೆ ಪಸರಿಸುತ್ತಿದ್ದಾರೆ. ಶೋಷಣೆಗೆ ಒಳಗಾದ ಎಲ್ಲರಿಗೂ ಅಂಬೇಡ್ಕರ್‌ ಪ್ರಸ್ತುತವಾಗಿದ್ದಾರೆ’ ಎಂದು ಹೇಳಿದರು.

ಚಿಂತಕ ಆರ್.ಕೆ. ಹುಡುಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಡಾ.ಬಿ.ಆರ್‌. ಅಂಬೇಡ್ಕರ್‌ ಕುರಿತು ನೂರಾರು ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೆ ಪ್ರಕಾಶಕರು ಹಾಗೂ ಲೇಖಕರು ಬರೆದು ಮುದ್ರಿಸಿದರೆ ಸಾಕಾಗುವುದಿಲ್ಲ. ಅದನ್ನು ತೆಗೆದುಕೊಂಡು ಹೋಗಿ ಓದುವ ರೂಢಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಪ್ರಾಧ್ಯಾಪಕರಲ್ಲಿಯೇ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಎಲ್ಲರೂ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.

ಮುಖ್ಯ ಎಂಜಿನಿಯರ್‌ ಶರಣಪ್ಪ ಸುಲಗುಂಟೆ ಮಾತನಾಡಿದರು. ಜೆಸ್ಕಾಂ ನಿವೃತ್ತ ಹಿರಿಯ ಎಂಜಿನಿಯರ್‌ ಬಿ.ಆರ್.ಬುದ್ಧಾ ಅಧ್ಯಕ್ಷತೆ ವಹಿಸಿದ್ದರು.

ಡಾ.ಭದಂತ ಆನಂದ ಕೌಸಲ್ಯಾಯನ ಅವರು ಬರೆದ ಹಾಗೂ ವಿಕ್ರಮ ವಿಸಾಜಿ ಕನ್ನಡಕ್ಕೆ ಅನುವಾದಿಸಿದ ‘ಒಂದು ವೇಳೆ ಬಾಬಾಸಾಹೇಬರು ಇರದಿದ್ದರೆ’ ಹಾಗೂ ನಾನಕ್‌ಚಂದ್‌ ರತ್ತು ಬರೆದ, ರಾಹು ಅವರು ಕನ್ನಡಕ್ಕೆ ಅನುವಾದಿಸಿದ ‘ಅಂಬೇಡ್ಕರ್‌ ಸ್ಮೃತಿ– ಸಂಸ್ಮೃತಿ’ ಎಂಬ ಕೃತಿಗಳನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಅಪ್ಪಗೆರೆ ಸೋಮಶೇಖರ್‌ ಅವರು ಬಿಡುಗಡೆ ಮಾಡಿದರು.

ಕೃತಿಯ ಅನುವಾದಕ ವಿಕ್ರಮ ವಿಸಾಜಿ, ಪ್ರಕಾಶಕ ದತ್ತಾತ್ರಯ ಇಕ್ಕಳಕಿ, ಅಶೋಕ ಶಟಕಾರ ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.