ADVERTISEMENT

ಅಂಬೇಡ್ಕರ್ ಸ್ತ್ರೀಯರ ದೇವತಾ ಮನುಷ್ಯ: ಇಂದುಮತಿ ಪಾಟೀಲ

ಪ್ರಬಂಧ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:17 IST
Last Updated 3 ಜನವರಿ 2026, 6:17 IST
ಕಲಬುರಗಿಯ ಜನರಂಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ಶಿವಕಾಮಿ ಪ್ರಭುದೇವ ಶಂಖಿನಮಠ ಅವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಕಲಬುರಗಿಯ ಜನರಂಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ಶಿವಕಾಮಿ ಪ್ರಭುದೇವ ಶಂಖಿನಮಠ ಅವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಕಲಬುರಗಿ: ‘ಮಹಿಳೆಯರ ಪಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ನಿಜಕ್ಕೂ ದೇವತಾ ಮನುಷ್ಯ’ ಎಂದು ಫರಹತಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಇಂದುಮತಿ ಪಾಟೀಲ ಬಣ್ಣಿಸಿದರು.

ನಗರದ ಕುಸನೂರು ರಸ್ತೆಯ ಜಿಡಿಎ ಬಡಾವಣೆಯ ಜನರಂಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ಶಿವಕಾಮಿ ಪ್ರಭುದೇವ ಶಂಖಿನಮಠ ಅವರ ಐದನೇ ಪುಣ್ಯಸ್ಮರಣೆ ಅಂಗವಾಗಿ ನಡೆಸಿದ ‘ಸಂವಿಧಾನದ ಆಧಾರದ ಮೇಲೆ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ’ ಪ್ರಬಂಧ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮನು ಸಂವಿಧಾನದಿಂದ ಮಹಿಳೆಯರಿಗೆ ನ್ಯಾಯ ಮತ್ತು ಸಮಾನತೆ ಎಂಬುದು ಇರಲಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣ, ಸಮಾನ ಅವಕಾಶ ಮತ್ತು ಕಾನೂನು ತಂದ ಫಲವಾಗಿ  ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ’ ಎಂದರು.

ADVERTISEMENT

‘ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ನಾಡಿನಲ್ಲಿ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮರ್ಯಾದೆಗೇಡು ಹತ್ಯೆಗಳು ನಿರಂತರ ಸಂಭವಿಸುತ್ತಿವೆ. ಮಹಿಳೆಯರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಮನದಲ್ಲಿ ಮನು ಸಂವಿಧಾನದ ಮನಸ್ಥಿತಿ ನಿವಾರಣೆಯಾಗದೇ ಸಮಾಜ ಸುಧಾರಣೆ ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಚಾರ್ಯೆ ಸವಿತಾ ತಿವಾರಿ, ‘ಮಹಿಳೆಯರು ಶತಮಾನಗಳಿಂದ ನಾಲ್ಕು ಗೋಡೆಗಳ ಮಧ್ಯೆ ಶೋಷಣೆ ಬದುಕು ಕಾಣುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೂಲಕ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಮತ್ತು ಅವಕಾಶಗಳು ದಕ್ಕಿದ್ದರಿಂದ ಅವರು ಪ್ರಗತಿ ಸಾಧಿಸಲು ಸಾಧ್ಯವಾಗಿದೆ’ ಎಂದರು.

‘ಮೊಬೈಲ್ ಬಳಕೆ ಮಾನವೀಯ ಸಂಬಂಧಗಳನ್ನು ಕಸಿಯುತ್ತಿದೆ. ಬಂಧುತ್ವದ ಸಂಬಂಧಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ರಕ್ತ ಸಂಬಂಧ ಬಹಳ ಮುಖ್ಯ’ ಎಂದರು.

ಜನರಂಗ ಅಧ್ಯಕ್ಷ ಶಂಕ್ರಯ್ಯ ಆರ್. ಘಂಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲಭೀಮ ಸಾಂಗ್ಲಿ ಮಾತನಾಡಿದರು. ದಿ.ಶಿವಕಾಮಿ ಶಂಖಿನಮಠ ಭಾವಚಿತ್ರಕ್ಕೆ ದೀಪ ಬೆಳಗಿಸಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಾಕ್ ಫನ್ ಬಳಗದ ಎಂ.ಬಿ.ಸಜ್ಜನ್, ರುದ್ರಾಕ್ಷಿ, ಎಸ್.ಮಲ್ಲಿಕಾರ್ಜುನ, ಬಸವಪ್ರಭು, ಈರಣ್ಣ ಜಮಾದಾರ, ಕಲಾವಿದ ಬಾಬುರಾವ್ ಎಚ್, ಪತ್ರಿಕೋದ್ಯಮ ವಿಭಾಗದ ಕೆ.ಎಂ.ಕುಮಾರಸ್ವಾಮಿ ಹಾಗೂ ಸರ್ಕಾರಿ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ಕಿರಣ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.‌‌

ಬಹುಮಾನ ವಿತರಣೆ

ದಿ.ಶಿವಕಾಮಿ ಶಂಖಿನಮಠ ಸ್ಮರಣಾರ್ಥ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಸ್ವಾಯತ್ತ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಶ್ವೇತಾ ಕೆ. ಮೊದಲ ಸ್ಥಾನ ಪಡೆದು ₹2 ಸಾವಿರ ನಗದು ಬಹುಮಾನ ಗೆದ್ದರು. ಆತೀಫ್‌ ಪಟೇಲ್‌ ಇಬ್ರಾಹಿಂ 2ನೇ ಸ್ಥಾನ ಪಡೆದು ₹1500 ಬಹುಮಾನ ಹಾಗೂ ಭೀಮಾಶಂಕರ ಹಿಲ್ಲಿ 3ನೇ ಸ್ಥಾನದೊಂದಿಗೆ ₹1 ಸಾವಿರ ಬಹುಮಾನ ಪಡೆದರು. ಕಾದಂಬರಿ ಆಧಾರಿತ ಮಕ್ಕಳ ಸಿನಿಮಾ ‘ನಮ್‍ಸಾಲಿ’ದಲ್ಲಿ ಬಾಲನಟರಾಗಿ ನಟಿಸಿದ ಶ್ರೀಶೈಲ ಬಾನೇಕರ್ ವಿನಯ ಬಾನೇಕರ್ ಜೀವನ ಸಿಂದಬಂದಗೆ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪುಸಕ್ತ ನೀಡಿ ಗೌರವಿಸಲಾಯಿತು.

ನಾವೆಲ್ಲ ಮಂಗಳ ಚಂದ್ರನ ಅಂಗಳದಲ್ಲಿ ವಾಸಿಸುವ ಯೋಜನೆ ರೂಪಿಸುತ್ತಿರು ಹೊತ್ತಲ್ಲೂ ಜಾತಿಗಳ ಸಂಘರ್ಷ ವರ್ಗಭೇದ ಅಳಿದಿಲ್ಲ. ಮಹಿಳೆರ ಮೇಲಿನ ದೌರ್ಜನ್ಯವೂ ನಿಂತಿಲ್ಲ
–ಶ್ರೀಮಂತ ಹೋಳ್ಕರ್, ಸರ್ಕಾರಿ ಸ್ವಾಯತ್ತ ಕಾಲೇಜಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.