ADVERTISEMENT

ಅಂಬಿಗರ ಚೌಡಯ್ಯ ಮೂರ್ತಿ ಭಗ್ನ: ಅಭಿವೃದ್ಧಿಗಾಗಿ ಮೂರ್ತಿ ವಿರೂಪ; 3 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:08 IST
Last Updated 18 ಅಕ್ಟೋಬರ್ 2025, 7:08 IST
ಮಲ್ಲಿಕಾರ್ಜುನ 
ಮಲ್ಲಿಕಾರ್ಜುನ    

ಕಲಬುರಗಿ: ‘ಮೂರ್ತಿ ಪ್ರತಿಷ್ಠಾಪಿಸಿ ವರ್ಷ ಕಳೆಯುತ್ತ ಬಂದರೂ ಸುತ್ತಲಿನ ಪ್ರದೇಶದ ಅಭಿವೃದ್ಧಿ ಕಂಡಿಲ್ಲ. ಮೂರ್ತಿ ಭಗ್ನಗೊಳಿಸಿ ಅಪಮಾನಿಸಿದರೆ, ಪ್ರತಿಭಟನೆಗಳು ನಡೆಯುತ್ತವೆ. ಜನರೂ ಭೇಟಿ ಕೊಡುತ್ತಾರೆ, ಹಣವೂ ಹರಿದು ಬರುತ್ತೆ. ಅದರಿಂದ ಅಭಿವೃದ್ಧಿ ಮಾಡಬಹುದು ಎಂಬ ತಂತ್ರ ರೂಪಿಸಿ ಆರೋಪಿಗಳು ಶಹಾಬಾದ್ ತಾಲ್ಲೂಕಿನ ಮುತಗಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ವಿರೂಪಗೊಳಿದ್ದರು’ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅ.9ರ ತಡರಾತ್ರಿಯಿಂದ ಅ.10ರ ನಸುಕಿನಲ್ಲಿ ಚೌಡಯ್ಯ ಪ್ರತಿಮೆ ವಿರೂಪಗೊಳಿಸಲಾಗಿತ್ತು. ಈ ಘಟನೆಗೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಣಗಿ ಗ್ರಾಮದ ಮಲ್ಲಿಕಾರ್ಜುನ ಪಾಟೀಲ, ಮುತಗಾ ಗ್ರಾಮದ ಸಾಬಣ್ಣ ಪಟ್ಟೇದಾರ ಹಾಗೂ ಶಿವರಾಜ ನಾಟಿಕಾರ ಎಂಬುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಘಟನಾ ಸ್ಥಳದಲ್ಲಿ ಸಿಸಿ ಟಿವಿ ಇರಲಿಲ್ಲ. ನಮಗೆ ಸಮೀಪ ಅಂದರೆ 8 ಕಿ.ಮೀ. ದೂರದಲ್ಲಿ ಸಿಸಿ ಟಿವಿ ಸಿಕ್ಕಿತ್ತು. ಹೀಗಾಗಿ ಆರಂಭದಲ್ಲಿ ಈ ಪ್ರಕರಣ ಭೇದಿಸುವುದು ತುಸು ಸವಾಲಾಗಿತ್ತು. ಘಟನಾ ಸ್ಥಳದಲ್ಲಿ ದೊರೆತ ಸುಳಿವು, ಪುರಾವೆಗಳು, ತಾಂತ್ರಿಕ ಸಾಕ್ಷ್ಯಗಳಿದ್ದರೂ ಅವು ಆರೋಪಿಗಳ ಪತ್ತೆಗೆ ಸಾಕಾಗಲಿಲ್ಲ. ಆ ಹಂತದಲ್ಲಿ ಶ್ವಾನ ಪಡೆಯ ‘ರೂಬಿ’ ಮುಖ್ಯ ಲೀಡ್‌ ಕೊಟ್ಟಿತು’ ಎಂದು ವಿವರಿಸಿದರು.

‘ಅದರಿಂದ ಆರೋಪಿಗಳ ಪತ್ತೆ ಸುಲಭವಾಯಿತು. ಈ ಹಿಂದೆ ಶಹಾಬಾದ್‌ನಲ್ಲಿ ನಡೆದ ಡಕಾಯಿತಿ ಪ್ರಕರಣ ಭೇದಿಸುವಲ್ಲಿಯೂ ರೂಬಿ ಪ್ರಮುಖ ಪಾತ್ರವಹಿಸಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಒಂದಿಷ್ಟು ಜನರ ಮೇಲೆ ಅನುಮಾನದಿಂದ ನಿಗಾ ಇಡಲಾಗಿತ್ತು. ಆರೋಪಿಗಳ ಪೈಕಿ ಸಾಬಣ್ಣ ಪಟ್ಟೇದಾರ ಪೊಲೀಸರು ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ. ರಾತ್ರಿ ಸಮಯದಲ್ಲಿ ಆರೋಪಿಗಳು ಪರಸ್ಪರ ಮಾತನಾಡುತ್ತಿದ್ದರು. ನಿಖರ ಸಾಕ್ಷ್ಯಗಳೊಂದಿಗೆ ಮೊದಲಿಗೆ ಸಾಬಣ್ಣನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೂವರೂ ಸೇರಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಅವರು ಒಪ್ಪಿಕೊಂಡಿದ್ದಾರೆ’ ಎಂದರು.

‘ಆರೋಪಿಗಳ ಪೈಕಿ ಶಿವರಾಜ ನಾಟಿಕಾರ ಮೇಲೆ ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ ಮಾಡಬೂಳ ಠಾಣೆಯಲ್ಲಿ ಪ್ರಕರಣವಿದೆ. ಆರೋಪಿ ಮಲ್ಲಿಕಾರ್ಜುನ ಎಂಬಾತ ಶಿವರಾಜ ಕಾರು ಚಾಲಕ. ಸಾಬಣ್ಣ ಹಾಗೂ ಈ ಇಬ್ಬರೂ ಆರೋಪಿಕೊಂಡು ಸೇರಿಕೊಂಡು ವ್ಯವಸ್ಥಿತವಾಗಿ ಯೋಜಿಸಿ ಕಲ್ಲಿನಿಂದ ಮೂರ್ತಿ ವಿರೂಪಗೊಳಿಸಿದ್ದರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಶಹಾಬಾದ್‌ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ್ ಲಾಡೆ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಇದ್ದರು.

ಸಾಬಣ್ಣಾ
ಶಿವರಾಜ ನಾಟಿಕಾರ
ಮಹನೀಯರ ಪ್ರತಿಮೆಗಳ ಜಾಗದಲ್ಲಿ ಸಿಸಿ ಟಿವಿ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಸ್ಥಳೀಯರು ಇಂಥ ಕೃತ್ಯಗಳ ಬಗೆಗೆ ತ್ವರಿತವಾಗಿ ಮಾಹಿತಿ ಹಂಚಿಕೊಳ್ಳಬೇಕು
ಅಡ್ಡೂರು ಶ್ರೀನಿವಾಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.