ADVERTISEMENT

ಸಿಪಿಐ ಇಲ್ಲಾಳ ಚಿಕಿತ್ಸೆಗಾಗಿ ಜೀರೊ ಟ್ರಾಫಿಕ್‌ನಲ್ಲಿ ಸಾಗಿದ ಆಂಬುಲೆನ್ಸ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 6:09 IST
Last Updated 26 ಸೆಪ್ಟೆಂಬರ್ 2022, 6:09 IST
ಆಂಬುಲೆನ್ಸ್‌
ಆಂಬುಲೆನ್ಸ್‌   

ಕಲಬುರಗಿ: ನಗರದ ಯುನೈಟೆಡ್ ಆಸ್ಪತ್ರೆಯಿಂದ ಕಲಬುರಗಿ ವಿಮಾನ ‌ನಿಲ್ದಾಣದವರೆಗೆ ಸೋಮವಾರ ಬೆಳಿಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಮಲಾಪುರ ವೃತ್ತದ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ಆಂಬುಲೆನ್ಸ್‌ನಲ್ಲಿ ಜೀರೊ ಟ್ರಾಫಿಕ್ ಮೂಲಕ ಕರೆದೊಯ್ಯುವಲ್ಲಿ ವೈದ್ಯರ ತಂಡ ಯಶಸ್ವಿಯಾಯಿತು.

ಮಹಾರಾಷ್ಟ್ರ ಗಡಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಸುಮಾರು 50 ಜನರಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡ ಶ್ರೀಮಂತ ಇಲ್ಲಾಳ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಬಳಿಕ ಅವರನ್ನು ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಾಳ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿದೆ. ಪೊಲೀಸರು ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಶೂನ್ಯ ಸಂಚಾರ ವ್ಯವಸ್ಥೆ ಮಾಡಿಕೊಟ್ಟರು.

ADVERTISEMENT

ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್‌ಎಸ್‌ಬಿ ಪೆಟ್ರೋಲ್ ಪಂಪ್, ಅನ್ನಪೂರ್ಣ ಕ್ರಾಸ್, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಖರ್ಗೆ ಪೆಟ್ರೋಲ್ ಪಂಪ್, ಸರಡಗಿ ಕ್ರಾಸ್ ಮೂಲಕ ‌ವಿಮಾನ ನಿಲ್ದಾಣ ತಲುಪಿತು. ಆಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಎಸ್‌ಪಿ ಇಶಾ ಪಂತ್ ನೇತೃತ್ವದಲ್ಲಿ ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಸಿಪಿಐ ಸೇರಿದಂತೆ 40ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.