ADVERTISEMENT

ಕಲಬುರಗಿ | ‘ಜಿಲ್ಲಾಧಿಕಾರಿ ಮುಜರಾಯಿ ಇಲಾಖೆ ಆದೇಶ ಪಾಲಿಸಲಿ’

ದಂಡಗುಂಡ ಬಸವೇಶ್ವರ ಟ್ರಸ್ಟ್‌ ಪ್ರಕರಣ: ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:09 IST
Last Updated 19 ಜುಲೈ 2025, 6:09 IST
ಆಂದೋಲಾ ಸ್ವಾಮೀಜಿ
ಆಂದೋಲಾ ಸ್ವಾಮೀಜಿ   

ಕಲಬುರಗಿ: ‘ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಗಳು ಟ್ರಸ್ಟ್‌ ರಚಿಸಿಕೊಳ್ಳಲು ಅವಕಾಶವಿಲ್ಲ ಎಂದು ಮುಜರಾಯಿ ಇಲಾಖೆಯೇ 2025ರ ಮಾರ್ಚ್‌ 19ರಂದು ಆದೇಶಿಸಿದೆ. ಚಿತ್ತಾಪುರದ ದಂಡಗುಂಡ ಬಸವೇಶ್ವರ ದೇವಸ್ಥಾನ ವಿಷಯದಲ್ಲಿ ಜಿಲ್ಲಾಧಿಕಾರಿ ಅವರು ಉಸ್ತುವಾರಿ ಸಚಿವರ ಆಣತಿಯಂತೆ ನಡೆದುಕೊಳ್ಳದೇ ಸರ್ಕಾರದ ಆದೇಶ ಪಾಲಿಸಬೇಕು’ ಎಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.

‘ದಂಡಗುಂಡ ಬಸವೇಶ್ವರ ದೇವಸ್ಥಾನದ ಟ್ರಸ್ಟ್‌ ಅಕ್ರಮ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಮುಜರಾಯಿ ಇಲಾಖೆಯೇ ಆ ಬಗ್ಗೆ ಆದೇಶ ಮಾಡಿದೆ. ಆದರೂ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಅಕ್ರಮ ಟ್ರಸ್ಟ್‌ನ ಪದಾಧಿಕಾರಿಗಳನ್ನು ಕರೆಯಿಸಿ ಚಟುವಟಿಕೆ ನಿಲ್ಲಿಸುವಂತೆ ಹೇಳಬೇಕಿತ್ತು. ಆದರೆ, ಈತನಕವೂ ಆ ಕೆಲಸ ಮಾಡಿಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಜುಲೈ 24ರಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಅಷ್ಟರೊಳಗೆ ಅಕ್ರಮ ಟ್ರಸ್ಟ್‌ ಹೊರಹಾಕಿದ್ದ ಸಂಗನಬಸವ ಶಿವಾಚಾರ್ಯರ ವಾಸ್ತವ್ಯಕ್ಕೆ ಕ್ರಮವಹಿಸಬೇಕು. ಅವರ ಭದ್ರತೆಗೆ ಗನ್‌ಮ್ಯಾನ್‌ ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಿಜೆಪಿ ಮುಖಂಡರಾಗಿರುವ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲರು ದಂಡಗುಂಡ ಅಕ್ರಮ ಟ್ರಸ್ಟ್‌ನ ಉಪಾಧ್ಯಕ್ಷರಾಗಿದ್ದಾರೆ. ಅವರು ರಾಜೀನಾಮೆ ನೀಡಿ ಟ್ರಸ್ಟ್‌ನಿಂದ ಹೊರಗೆ ಬರಬೇಕು’ ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಗನಬಸವ ಸ್ವಾಮೀಜಿ, ಗುರುಶಾಂತ ಟೆಂಗಳಿ, ಬಸನಗೌಡ ಕನ್ನೆಕೊಳು, ಚನ್ನಾರೆಡ್ಡಿಗೌಡ ಹೊಡಲ, ಮಲ್ಲಿಕಾರ್ಜುನ ಪಾಟೀಲ, ರಾಕೇಶ ಜಮಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.