ADVERTISEMENT

ಅಮ್ಮನ ಮಡಿಲಿಂದ ಅಂಗನವಾಡಿಗೆ...

ಇಂದಿನಿಂದ ಜಿಲ್ಲೆಯಲ್ಲೂ ಎಲ್ಲ ಅಂಗನವಾಡಿಗಳು ಆರಂಭ, ಹಬ್ಬದ ವಾತಾವರಣ ನಿರ್ಮಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 5:23 IST
Last Updated 8 ನವೆಂಬರ್ 2021, 5:23 IST
ಸೋಮವಾರ (ನ. 8)ದಿಂದ ಅಂಗನವಾಡಿಗಳು ಆರಂಭವಾಗುತ್ತಿರುವ ಕಾರಣ, ಕಲಬುರಗಿಯ ಅಳಂದ ಕಾಲೊನಿಯಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ಸಿಬ್ಬಂದಿ ರಂಗೋಲಿ ಹಾಕಿ, ಬಲೂನು ಕಟ್ಟಿ ಸಿದ್ಧತೆ ನಡೆಸಿದರು
ಸೋಮವಾರ (ನ. 8)ದಿಂದ ಅಂಗನವಾಡಿಗಳು ಆರಂಭವಾಗುತ್ತಿರುವ ಕಾರಣ, ಕಲಬುರಗಿಯ ಅಳಂದ ಕಾಲೊನಿಯಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ಸಿಬ್ಬಂದಿ ರಂಗೋಲಿ ಹಾಕಿ, ಬಲೂನು ಕಟ್ಟಿ ಸಿದ್ಧತೆ ನಡೆಸಿದರು   

ಕಲಬುರಗಿ: ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲೂ ಸೋಮವಾರದಿಂದ (ನ. 8) ಮತ್ತೆ ಚಿಣ್ಣರ ಚಿಲಿಪಿಲಿ ಆರಂಭವಾಗಲಿದೆ. ಪುಟಾಣಿಗಳ ಸ್ವಾಗತಕ್ಕಾಗಿ ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾನುವಾರದಿಂದಲೇ ಸಿದ್ಧತೆ ನಡೆಸಿದರು.‌

ಇಷ್ಟು ದಿನ ಅಮ್ಮನ ಮಡಿಲಲ್ಲಿ, ಮನೆಯ ಅಂಗಳದಲ್ಲೇ ಆಡಿ ನಲಿದ ‘ಚಿನ್ನಾರಿ ಮುತ್ತುಗಳು’ ಇನ್ನು ತಮ್ಮ ಮಿತ್ರರೊಂದಿಗೂ ಹಾಡಿ, ನಲಿಯಲಿದ್ದಾರೆ. ಆಟವಾಡಿ ಖುಷಿಪಡಲಿದ್ದಾರೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಅಂದರೆ ಎರಡು ತಾಸು ಮಾತ್ರ ಅಂಗನವಾಡಿ ನಡೆಸುವಂತೆ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಅಂಗನವಾಡಿಗಳನ್ನು ಸ್ವಚ್ಛಗೊಳಿಸಬೇಕು, ಭಾನುವಾರವೇ ವೈರಾಣು ನಾಶಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು, ಸುತ್ತಲಿನ ಪರಿಸರದಲ್ಲಿ ಮಾಲಿನ್ಯ ಇರದಂತೆ ನೋಡಿಕೊಳ್ಳಬೇಕು, ಮಕ್ಕಳ ಕುಡಿಯುವ ನೀರು ಹಾಗೂ ಶೌಚಾಲಯದ ಸಿದ್ಧತೆಗಳೂ ಪೂರ್ಣಗೊಂಡಿರಬೇಕು ಎಂದು ಸೂಚಿಸಲಾಗಿದೆ.‌

ADVERTISEMENT

ಈ ಹಿನ್ನೆಲೆಯಲ್ಲಿ ಬಹುತೇಕ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ ಅಂಗನವಾಡಿ ಕಟ್ಟಡಗಳನ್ನು ಸ್ವಚ್ಛಗೊಳಿಸುವುದು, ನೆಲ– ಗೋಡೆಗಳನ್ನು ಸ್ಯಾನಿಟೈಸ್‌ ಮಾಡುವುದು ಭಾನುವಾರ ಕಂಡುಬಂತು. ಮತ್ತೆ ಕೆಲವರು ಬಾಗಿಲಿಗೆ ಮಾವಿನ ತೋರಣ, ಬಾಳೆದಿಂಡು, ಬಲೂನುಗಳನ್ನು ಕಟ್ಟಿ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. ಮಕ್ಕಳ ಆಟದ ಸಾಮಗ್ರಿಗಳು, ಗೊಂಬೆಗಳು, ಜಾರುಗುಂಡಿ, ಅಂಕಿ–ಮಗ್ಗಿಗಳ ಟೇಬಲ್‌, ಮೋಜಿನ ಆಟಗಳ ಸಲಕರಣೆಗಳನ್ನೂ ದುರಸ್ತಿ ಮಾಡಿ ಸಿದ್ಧಗೊಳಿಸಿದರು.

ಹಣಕಾಸಿನ ಬರ: ‘ಚಿಣ್ಣರಿಗೆ ಬಲೂನು ನೀಡಿ ಸ್ವಾಗತಿಸಬೇಕು, ಸಿಹಿ ಕೊಟ್ಟು ಅವರ ಮನಸ್ಸು ಖುಷಿಯಾಗುವಂಥ ಪರಿಸರ ನಿರ್ಮಿಸಬೇಕು ಎಂದೂ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿದೆ. ಆದರೆ, ಇದರ ಸಿದ್ಧತೆಗಾಗಿ ಯಾವುದೇ ರೀತಿಯ ಹಣ ನೀಡಿಲ್ಲ. ಅಂಗನವಾಡಿಗಳಿಗೆ ನೀಡಿರುವ ಅನುದಾನದಲ್ಲೇ ತಯಾರಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಹೀಗಾಗಿ, ನಾವು ಮನೆಯಿಂದಲೇ ಸಿಹಿ ತಿಂಡಿ ಮಾಡಿಕೊಂಡು ಮಕ್ಕಳಿಗೆ ಹಂಚಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಅಂಗನವಾಡಿ ಕಾರ್ಯಕರ್ತೆಯರಾದ ಸುಶೀಲಾ, ವೈಶಾಲಿ, ಅಕ್ಷತಾ ಜಾಗನೂರ, ದೀಪಾಲಿ ಚಳಕಿ, ಶಬಾನಾ, ಜಹೀರಾ ಬೇಗಂ ಪ್ರತಿಕ್ರಿಯಿಸಿದರು.

ಆರ್‌ಟಿಪಿಸಿಆರ್‌ ಗೊಂದಲ: ಅಂಗನವಾಡಿಗಳಿಗೆ ಹಾಜರಾಗುವ ಪ್ರತಿಯೊಬ್ಬ ಕಾರ್ಯಕರ್ತೆ ಹಾಗೂ ಸಹಾಯಕಿಯರು ಕಡ್ಡಾಯವಾಗಿ 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ್‌ ವರದಿ ನೀಡಬೇಕು ಎಂದು ಸರ್ಕಾರ ಕಡ್ಡಾಯ ಮಾಡಿದೆ. ಇದು ಬಹಳಷ್ಟು ಅಂಗನವಾಡಿ ಕಾರ್ಯಕರ್ತೆಯರಿಗೆ ತಲೆನೋವಾಗಿ ಪರಿಣಮಿಸಿದೆ.

‘ನಮ್ಮನ್ನೂ ಫ್ರಂಟ್‌ಲೈನ್‌ ವಾರಿಯರ್‌ ಎಂದು ಪರಿಗಣಿಸಿದ್ದರಿಂದ ಈಗಾಗಲೇ ಎಲ್ಲರೂ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದೇವೆ. ಆದರೆ, ಆರ್‌ಟಿಪಿಸಿಆರ್‌ ಸಿದ್ದಕ್ಕಿದ್ದಂತೆ ಎಲ್ಲಿಂದ ತರುವುದು. ಅದಕ್ಕೆ ಕನಿಷ್ಠ ಸಮಯ ಬೇಕಾಗುತ್ತದೆ’ ಎಂಬುದು ಅವರ ಕೋರಿಕೆ.

ಮೇಲಾಗಿ, ತಮ್ಮ ಮಕ್ಕಳನ್ನು ಕಳುಹಿಸಲು ಸ್ವಯಂಪ್ರೇರಣೆಯಿಂದ ಒಪ್ಪಿದ್ದೇವೆ ಎಂಬುದಾಗಿ ಎಲ್ಲ ಪಾಲಕರಿಂದಲೂ ಲಿಖಿತ ಪತ್ರ ಪಡೆಯಬೇಕು, ಒಂದು ತಿಂಗಳ ಕಾಲ ಮಕ್ಕಳಿಗೆ ಅಂಗನವಾಡಿಗಳಲ್ಲಿ ಊಟ ಕೊಡುವಂತಿಲ್ಲ, ಶೀತ– ಕೆಮ್ಮು– ಜ್ವರ ಇರುವ ಬಗ್ಗೆ ಪ್ರತಿದಿನವೂ ಪರಿಶೀಲಿಸಬೇಕು ಎಂಬ ಇತ್ಯಾದಿ ಜವಾಬ್ದಾರಿಗಳನ್ನೂ ಕಾರ್ಯಕರ್ತೆಯರಿಗೆ ವಹಿಸಲಾಗಿದೆ.

ಎಲ್‌ಕೆಜಿ, ಯುಕೆಜಿ: ಇನ್ನೊಂದೆಡೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಭರದ ಸಿದ್ಧತೆಗಳು ನಡೆದವು. 3ರಿಂದ 6 ವರ್ಷದೊಳಗಿನ ಪುಟಾಣಿ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಶಿಕ್ಷಣ ಸಂಸ್ಥೆಗಳಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.