ADVERTISEMENT

ಕಲಬುರಗಿ | ಕಿಡಿಗೇಡಿಗಳ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:22 IST
Last Updated 11 ಸೆಪ್ಟೆಂಬರ್ 2025, 5:22 IST
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮೇಲೆ ನಕಲಿ ಯೂಟ್ಯೂಬ್ ಚಾನೆಲ್ ಅವರು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಬುಧವಾರ ಅಫಜಲಪುರ ತಹಶೀಲ್ದಾರರ ಕಚೇರಿ ಎದುರುಗಡೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮೇಲೆ ನಕಲಿ ಯೂಟ್ಯೂಬ್ ಚಾನೆಲ್ ಅವರು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಬುಧವಾರ ಅಫಜಲಪುರ ತಹಶೀಲ್ದಾರರ ಕಚೇರಿ ಎದುರುಗಡೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು   

ಅಫಜಲಪುರ: ‘ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಕೆಲ ಕಿಡಿಗೇಡಿಗಳು ಮತ್ತು ನಕಲಿ ಪತ್ರಕರ್ತರು ಮಾನಸಿಕ ಹಿಂಸೆ ಮತ್ತು ಅವಾಚ್ಯ ಪದಗಳ ಬಳಕೆ ಮಾಡುತ್ತಿದ್ದಾರೆ. ಈ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬುಧವಾರ ಅಂಗನವಾಡಿ ಕಾರ್ಯಕರ್ತೆಯರು ತಹಶೀಲ್ದಾರರ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿದರು.  

ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಾಂತ ಘಂಟೆ ಮಾತನಾಡಿ, ‘ನಿರಂತರವಾಗಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಮತ್ತು ಸಹಾಯಕಿಯರ ಮೇಲೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಗುಂಡಾವರ್ತನೆ  ನಡೆದಿವೆ. ಯೂಟ್ಯೂಬ್ ಹಾಗೂ ನಕಲಿ ಪತ್ರಕರ್ತರಿಂದ ಅಂಗನವಾಡಿ ಕೇಂದ್ರಗಳಿಗೆ ಯಾವುದೇ ಸೂಚನೆ ನೀಡದೆ ಆಹಾರ ಧಾನ್ಯ ಪರಿಶೀಲನೆ ನೇಪದಲ್ಲಿ ತೆರಳಿ ಭಯದ ವಾತವರಣ ಸೃಷ್ಟಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಚೆಗೆ ತಾಲೂಕಿನ ರೇವೂರ್‌.ಬಿ ಮತ್ತು ಬಡದಾಳ ಅಂಗನವಾಡಿ ಕೇಂದ್ರಗಳಿಗೆ ವಿಜಯ ಟಿವಿ ಹೆಸರಿನಲ್ಲಿ ನಾಲ್ಕು ಜನರು ಬಂದು,  ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಚಿತ್ರ ಹಿಂಸೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನಕ್ಕೆ ತರದೆ ಪರಿಶೀಲಿಸುವುದು ತಪ್ಪು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ತಾಲೂಕು ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಕಲಾವತಿ ಹಾಗೂ ಪ್ರಧಾನ ಕಾರ್ಯದರ್ಶಿ ಬಿಸ್ಮಿಲ್ಲಾ ಖೇಡ್ ಮಾತನಾಡಿದರು. ಸಮಾದೇವಿ ರಾಠೋಡ್, ಕಲಾವತಿ, ಬಸಮ್ಮ ಗುತ್ತೇದಾರ, ಶಿವಲೀಲಾ ಪಾಟೀಲ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.