
ಕಾಳಗಿ: ಧಾರ್ಮಿಕ ದತ್ತಿ ಇಲಾಖೆಯ ತಾಲ್ಲೂಕಿನ ಕೋರವಾರ ಹೊರವಲಯದ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಪ್ರಾರಂಭಗೊಂಡಿದೆ.
ಈ ನಿಮಿತ್ತ ಅಣಿವೀರಭದ್ರೇಶ್ವರ ದೇವಸ್ಥಾನವು ಫಲ-ಪುಷ್ಪ ಮಾಲೆಗಳು, ತಳಿರು ತೋರಣ, ವಿದ್ಯುತ್ ದೀಪಗಳಿಂದ ಝಗ ಮಗಿಸುತ್ತಿದೆ. ಈ ನಡುವೆ ಶಿವರಾತ್ರಿ ಅಮಾವಾಸ್ಯೆಯ ಮಂಗಳವಾರ ಬೆಳಿಗ್ಗೆಯಿಂದಲೇ ವಿವಿಧೆಡೆಯಿಂದ ದೇವಸ್ಥಾನಕ್ಕೆ ಹರಿದುಬರುತ್ತಿದ್ದ ಅಪಾರ ಭಕ್ತರ ದಂಡು ಜಾತ್ರೆಗೆ ಶ್ರದ್ಧಾಭಕ್ತಿಯ ಕಳೆಕಟ್ಟಿದ್ದಾರೆ.
ಬೆಳಿಗ್ಗೆ ಹಿರಿಯ ಅರ್ಚಕ ಧನಂಜಯ್ಯ ಹಿರೇಮಠ ವೈದಿಕತ್ವದಲ್ಲಿ ಭಕ್ತರು ಗರ್ಭಗುಡಿಯೊಳಗಿನ ಅಣಿವೀರಭದ್ರೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.
ಸಂಜೆಯಾಗುತ್ತಿದ್ದಂತೆ ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಕಾಳಗಿ ತಾಲ್ಲೂಕು ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಶಹಾಬಾದ್‌ನ ಮಲ್ಲು ಸಾಹು ಗೊಳೇದ ಸೇರಿದಂತೆ ಎಂಟಕ್ಕೂ ಹೆಚ್ಚು ದಂಪತಿಗಳು ಅಗ್ನಿಕುಂಡಕ್ಕೆ ಹೋಮ, ವಿಶೇಷ ಪೂಜೆ ಸಲ್ಲಿಸಿ ನಮಿಸಿದರು.
ನಂತರದಲ್ಲಿ 10 ಟನ್‌ಗೂ ಹೆಚ್ಚು ಕಟ್ಟಿಗೆಗಳ ರಾಶಿಯ ಅಗ್ನಿಕುಂಡಕ್ಕೆ ತುಪ್ಪ ಸುರಿದು ಅಗ್ನಿಸ್ಪರ್ಶ ಮಾಡಲಾಯಿತು. ಆ ಬಳಿಕ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಡರಾತ್ರಿ ಆಗುತ್ತಿದ್ದಂತೆ ಬೆಳ್ಳಿ ಪಲ್ಲಕ್ಕಿಯೊಂದಿಗೆ ಪುರವಂತರ ಮೆರವಣಿಗೆ ನಡೆಸಿ ಅಗ್ನಿಪ್ರವೇಶ ಮಾಡಲು ಹರಕೆಯ ಭಕ್ತರು ಸಿದ್ಧತೆ ನಡೆಸಿದರು.
ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ, ಉಪತಹಶೀಲ್ದಾರ್ ಮಾಣಿಕ ಘತ್ತರಗಿ, ಶಿರಸ್ತೇದಾರ ಸಂತೋಷ ಚಂದನಕೇರಿ, ಕಂದಾಯ ನಿರೀಕ್ಷಕ ರವೀಂದ್ರ ಮುತ್ತಗಿ, ಬಸವಣಪ್ಪ ಹೂಗಾರ, ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ, ಅಣಿವೀರಯ್ಯ ಸಾಲಿಮಠ ಅನೇಕರು ಇದ್ದರು. ನಿರಂತರ ಅನ್ನದಾಸೋಹದಿಂದಾಗಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಭವ್ಯ ರಥೋತ್ಸವ ಇಂದು: ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ. ಸಂಜೆ 4 ಗಂಟೆಗೆ ನಂದಿಧ್ವಜ, ಕಳಸ ಮತ್ತು ಪುರವಂತರ ಮೆರವಣಿಗೆ ಆರಂಭವಾಗುವುದು ಹಾಗೂ ರಾತ್ರಿ 8 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.