ADVERTISEMENT

‘ಉಳ್ಳವರು–ಇಲ್ಲದವರ ಮಧ್ಯದ ಅಂತರ ಕಡಿಮೆಯಾಗಲಿ’

ಕ್ರಾಂತಿಕಾರಿ ಜನಪರ ಲೇಖಕ ಅಣ್ಣಾಭಾವು ಸಾಠೆ ಜನ್ಮಶತಮಾನೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:28 IST
Last Updated 1 ಆಗಸ್ಟ್ 2019, 14:28 IST
ಕ್ರಾಂತಿಕಾರಿ ಜನಪರ ಲೇಖಕ ಅಣ್ಣಾಭಾವು ಸಾಠೆ ಅವರ ಭಾವಚಿತ್ರಕ್ಕೆ ಡಾ.ವಿಠ್ಠಲ ದೊಡ್ಡಮನಿ ಮಾಲಾರ್ಪಣೆ ಮಾಡಿದರು. ತಿಪ್ಪಣ್ಣಪ್ಪ ಕಮಕನೂರ, ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ಕೆ.ಬಿ.ಶಾಣಪ್ಪ, ಪ್ರೊ.ಆರ್.ಕೆ.ಹುಡಗಿ, ಬಸಣ್ಣಾ ಸಿಂಗೆ ಇದ್ದರು 
ಕ್ರಾಂತಿಕಾರಿ ಜನಪರ ಲೇಖಕ ಅಣ್ಣಾಭಾವು ಸಾಠೆ ಅವರ ಭಾವಚಿತ್ರಕ್ಕೆ ಡಾ.ವಿಠ್ಠಲ ದೊಡ್ಡಮನಿ ಮಾಲಾರ್ಪಣೆ ಮಾಡಿದರು. ತಿಪ್ಪಣ್ಣಪ್ಪ ಕಮಕನೂರ, ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ಕೆ.ಬಿ.ಶಾಣಪ್ಪ, ಪ್ರೊ.ಆರ್.ಕೆ.ಹುಡಗಿ, ಬಸಣ್ಣಾ ಸಿಂಗೆ ಇದ್ದರು    

ಕಲಬುರ್ಗಿ: ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳ ಬಳಿಕವೂ ಉಳ್ಳವರು ಮತ್ತು ಇಲ್ಲದವರ ಮಧ್ಯೆ ಆರ್ಥಿಕ ತಾರತಮ್ಯ ಹೆಚ್ಚುತ್ತಲೇ ಇದೆ. ಒಬ್ಬರ ಬಳಿ 500 ಎಕರೆ ಜಮೀನು ಇದ್ದರೆ ಮತ್ತೊಬ್ಬರ ಬಳಿ ಒಂದು ಎಕರೆಯೂ ಇಲ್ಲದ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಕ್ರಾಂತಿಕಾರಿ ಲೇಖಕ ಅಣ್ಣಾಭಾವು ಸಾಠೆ ಅವರ ವಿಚಾರಗಳ ಬೆಳಕಲ್ಲಿ ಹೋರಾಟ ನಡೆಯಬೇಕಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಅಭಿಪ್ರಾಯಪಟ್ಟರು.

ಕ್ರಾಂತಿಕಾರಿ ಜನಪರ ಲೇಖಕ ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಸಮಾವೇಶ ಸ್ವಾಗತ ಸಮಿತಿಯು ಸಾಠೆ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದಿನ ವ್ಯವಸ್ಥೆಯಲ್ಲಿ ಒಂದು ಎಕರೆ ಕೃಷಿ ಭೂಮಿ ಪಡೆಯಲು ಸಾಕಷ್ಟು ಪರದಾಡಬೇಕಾಗಿದೆ. ಸಾಕಷ್ಟು ಶ್ರಮ ಹಾಕಿದ ಬಳಿಕವೂ ಭೂಮಿ ದೊರೆಯದೇ ಸಾವಿಗೀಡಾಗುವ ಚೋಮನಂಥವರು ಈ ದೇಶದಲ್ಲಿ ಸಾಕಷ್ಟು ಜನ ಇದ್ದಾರೆ’ ಎಂದು ವಿಷಾದಿಸಿದರು.

‘ಬಡತನ–ಸಿರಿತನ ಎಂಬುದು ದೈವ ನಿರ್ಮಿತ ಅಲ್ಲ. ಇದನ್ನು ಪರಿಹರಿಸಬೇಕಾದ ತುರ್ತು ಈಗ ಇದೆ. ಸಾಠೆ ಅವರು ಪಕ್ಕದ ರಾಜ್ಯದವರಾದರೂ ಅವರ ಬಹುತೇಕ ಕಾದಂಬರಿಗಳು ಕನ್ನಡ ಭಾಷೆಗೆ ಅನುವಾದ ಆಗದಿರುವುದು ಇರುವುದು ವಿಷಾದನೀಯ’ ಎಂದರು.

ADVERTISEMENT

ರಾಜ್ಯಸಭೆ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ‘ನಾನು ಮೊದಲಿನಿಂದಲೂ ಎಡಪಂಥೀಯ. ಯಾವುದೋ ಘಳಿಗೆಯಲ್ಲಿ ಬಲಪಂಥಕ್ಕೆ ವಾಲಿದ್ದೆ. ಇದೀಗ ಮತ್ತೆ ಎಡಪಂಥದ ವಿಚಾರಗಳಿಂದ ಆಕರ್ಷಿತನಾಗಿ ಬಂದಿದ್ದೇನೆ. ಸಾಠೆ ಅವರ ಜೀವನ ನಮಗೆಲ್ಲ ಮಾದರಿಯಾಗಬೇಕು’ ಎಂದು ಹೇಳಿದರು.

ಸಮಿತಿಯ ಪ್ರಧಾನ ಸಂಚಾಲಕ ಪ‍್ರೊ.ಆರ್‌.ಕೆ.ಹುಡಗಿ ಮಾತನಾಡಿ, ‘ಸಾಠೆ ಅವರು 35 ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಫಕೀರ ಕಾದಂಬರಿ ಬಿಟ್ಟರೆ ಬೇರೆ ಯಾವುದೂ ಕನ್ನಡಕ್ಕೆ ಅನುವಾದವಾಗಿಲ್ಲ. ಒಂದು ವರ್ಷದವರೆಗೆ ಜನ್ಮಶತಮಾನೋತ್ಸವ ಆಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ದಾನಿಗಳು ಪ್ರತಿಯೊಂದು ಕಾದಂಬರಿಯ ಪ್ರಕಟಣೆ ವೆಚ್ಚ ವಹಿಸಿಕೊಂಡರೆ ಅವುಗಳನ್ನು ಕನ್ನಡಕ್ಕೆ ಅನುವಾದಿಸುವುದು ಕಷ್ಟದ ಕೆಲಸವೇನಲ್ಲ’ ಎಂದರು.

ಇದಕ್ಕೆ ಸ್ಪಂದಿಸಿದ ಅಭಿಯಾನಿಯೊಬ್ಬರು ಒಂದು ಕಾದಂಬರಿಯ ಅನುವಾದ ಹಾಗೂ ಪ್ರಕಟಣೆ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.

ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ‘ಬುದ್ಧ, ಅಂಬೇಡ್ಕರ್‌ ಹಾಗೆ ಹೇಳಿದ್ದರು, ಹೀಗೆ ಹೇಳಿದ್ದರು ಎಂಬುದನ್ನು ಬಿಡಬೇಕು. ನಾವು ಏನು ಮಾಡಿದ್ದೇವೆ ಎಂಬುದರತ್ತ ಚಿತ್ತ ಹರಿಸಬೇಕು. ಗತಕಾಲವನ್ನು ನೆನಪಿಸಿಕೊಳ್ಳುವುದು ಆಗಬಾರದು. ಹಿಂದಿನವರಿಗಿಂತ ಒಂದು ಹೆಜ್ಜೆ ಮುಂದೆ ಇಡಲು ಪ್ರಯತ್ನಿಸಬೇಕು’ ಎಂದರು.

ವಿಧಾನಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ‘ದೇಶದ ಜನರನ್ನು ಎಚ್ಚರಿಸಲು ಸಾಕಷ್ಟು ಶ್ರಮಿಸಿದ ಸಾಠೆ ಅವರ ಬದುಕು ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು‌’ ಎಂದರು. ಸಮಿತಿ ಅಧ್ಯಕ್ಷ ಡಾ.ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.