ADVERTISEMENT

ಎಪಿಎಂಸಿ ಕಾಯ್ದೆ ಸಾಧಕ, ಬಾಧಕಗಳ ಬಗ್ಗೆ ಚರ್ಚೆ: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 4:14 IST
Last Updated 4 ಜೂನ್ 2023, 4:14 IST
ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಪತ್ನಿಯೊಂದಿಗೆ ಶರಣಬಸವೇಶ್ವರರ ದರ್ಶನ ಪಡೆದರು. ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ ಇದ್ದರು
ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಪತ್ನಿಯೊಂದಿಗೆ ಶರಣಬಸವೇಶ್ವರರ ದರ್ಶನ ಪಡೆದರು. ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ ಇದ್ದರು   

ಕಲಬುರಗಿ: ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳು ನಷ್ಟದಲ್ಲಿದ್ದು, ಶೀಘ್ರ ಎಲ್ಲ ಜಿಲ್ಲೆಗಳ ಎಪಿಎಂಸಿ ಕಾರ್ಯದರ್ಶಿಗಳ ಸಭೆ ಕರೆದು ಈ ಕಾಯ್ದೆ ರದ್ದುಗೊಳಿಸಿ, ಹಿಂದಿನ ಕಾಯ್ದೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ಜಿಲ್ಲೆಗೆ ಭೇಟಿ ನೀಡಿದ ಅವರು ಎಪಿಎಂಸಿಯ ಕಾರ್ಯದರ್ಶಿ, ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತಿದ್ದುಪಡಿ ಕಾಯ್ದೆಯ ನಂತರ ಬೆಳವಣಿಗೆ ಬಗ್ಗೆ ಸಚಿವರು ಮಾಹಿತಿ ಕೇಳಿದರು. ಇದಕ್ಕೆ ಎಪಿಎಂಸಿ ಕಾರ್ಯದರ್ಶಿ ಅಲ್ಲಾಬಕ್ಷ್ ಬಿಜಾಪುರೆ ಮಾಹಿತಿ ನೀಡಿ, ತಿದ್ದುಪಡಿ ಕಾಯ್ದೆ ಜಾರಿ ನಂತರ ಎಪಿಎಂಸಿ ನಷ್ಟದಲ್ಲಿದೆ. ಕಾಯ್ದೆ ಜಾರಿಗೂ ಮುನ್ನ ಎಪಿಎಂಸಿಗೆ ವಾರ್ಷಿಕವಾಗಿ ₹ 8 ಕೋಟಿ ವರಮಾನವಿತ್ತು. ಆದರೆ, ನಂತರ ₹ 3 ಕೋಟಿಗೆ ಇಳಿದಿದೆ ಎಂದರು.

ADVERTISEMENT

‘ಎಪಿಎಂಸಿಯಲ್ಲಿ 47 ಹುದ್ದೆಗಳು ಮಂಜೂರಾಗಿದ್ದು, 22 ಜನರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಎಪಿಎಂಸಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ಜಹಗೀರದಾರ್, ಎಇಇ ನೀಲಕಂಠ ಜಮಾದಾರ ಕಲಬುರಗಿ ವಿಭಾಗದಲ್ಲಿ ನಡೆಯುವ ಪ್ರಗತಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಯಿಂದ ಎಪಿಎಂಸಿಗಳು ನಷ್ಟದಲ್ಲಿರುವ ಬಗ್ಗೆ ಬೆಂಗಳೂರಿನಲ್ಲಿ ಶೀಘ್ರ ಸಭೆ ನಡೆಸಲಾಗುವುದು. ಎಲ್ಲ ಎಪಿಎಂಸಿಗಳಿಂದ ಮಾಹಿತಿ ಸಂಗ್ರಹಿಸಿ ಕಾಯ್ದೆ ಕೈ ಬಿಡುವ, ಹಿಂದಿನ ಕಾಯ್ದೆ ಮರಳಿ ಜಾರಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಗೂ ಮುನ್ನ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರ್ ಕಲಬುರಗಿಗೆ ಮಂಜೂರಾದ ಜವಳಿ ಪಾರ್ಕ್ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಸಚಿವರು ಇದಕ್ಕೂ ಮುನ್ನ ನಗರದ ಶರಣಬಸವೇಶ್ವರ ದೇವಸ್ಥಾನ ಹಾಗೂ ಖಾಜಾ ಬಂದಾನವಾಜ್ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.