ADVERTISEMENT

ಚಿಂಚೋಳಿ: ಪರಿಶಿಷ್ಟರ ಸಮೀಕ್ಷೆ ಸರಳಿಕರಣಕ್ಕೆ ಮನವಿ 

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:58 IST
Last Updated 28 ಮೇ 2025, 14:58 IST
ಬೆಂಗಳೂರಿನಲ್ಲಿ ನ್ಯಾ.ನಾಗಮೋಹನದಾಸ್‌ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮತ್ತು ಚಿಂಚೋಳಿಯ ಬಂಜಾರಾ ಸಮಾಜದ ಮುಖಂಡರು ಗುಳೆ ಕಾರ್ಮಿಕರ ಸಮಸ್ಯೆ ವಿವರಿಸಿದರು 
ಬೆಂಗಳೂರಿನಲ್ಲಿ ನ್ಯಾ.ನಾಗಮೋಹನದಾಸ್‌ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮತ್ತು ಚಿಂಚೋಳಿಯ ಬಂಜಾರಾ ಸಮಾಜದ ಮುಖಂಡರು ಗುಳೆ ಕಾರ್ಮಿಕರ ಸಮಸ್ಯೆ ವಿವರಿಸಿದರು    

ಚಿಂಚೋಳಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಲು ದತ್ತಾಂಶ ಸಂಗ್ರಹಕ್ಕಾಗಿ ನಡೆಯುತ್ತಿರುವ ಪರಿಶಿಷ್ಟರ ಸಮೀಕ್ಷೆಯಿಂದ ಬಂಜಾರಾ ಸಮುದಾಯದ ಬಡ, ಅನಕ್ಷರಸ್ಥ ವಲಸಿಗರು ದೂರ ಉಳಿಯದಂತೆ ಮತ್ತು ಅವರ ಒಳಗೊಳ್ಳುವಿಕೆಗೆ ಕ್ರಮ ಕೈಗೊಳ್ಳಲು ನ್ಯಾ.ಎಚ್.ಎನ್.ನಾಗಮೋಹನದಾಸ್‌ ಅವರಲ್ಲಿ ಬಂಜಾರಾ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

ಬೆಂಗಳೂರಿನ ಯುವನಿಕಾದಲ್ಲಿರುವ ಆಯೋಗದ ಕಾರ್ಯಾಲಯದಲ್ಲಿ ನ್ಯಾ.ನಾಗಮೋಹನದಾಸ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ವಕೀಲ ಅನಂತ ನಾಯಕ, ಚಿಂಚೋಳಿ ತಾಲ್ಲೂಕು ಬಂಜಾರಾ ಸೇವಾ ಸಂಘದ ಅಧ್ಯಕ್ಷ ರಾಮಶೆಟ್ಟಿ ಪವಾರ, ಉಪಾಧ್ಯಕ್ಷ ತುಕಾರಾಮ ಪವಾರ ಅವರು ಭೇಟಿ ಮಾಡಿ ಸಮಸ್ಯೆಗಳನ್ನು ತೆರೆದಿಟ್ಟರು.

ಚಿಂಚೋಳಿ ಸೇರಿದಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳ ಬಂಜಾರಾ ಕಾರ್ಮಿಕರು ಮುಂಬಯಿ, ಪುಣೆ, ಹೈದರಾಬಾದ್‌ ಮೊದಲಾದ ನಗರಗಳಿಗೆ ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ. ಅವರನ್ನು ಸಮೀಕ್ಷೆಯಲ್ಲಿ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದುಡಿಮೆ ಅರಸಿ ಹೋಗಿರುವ ಅವರ ಬದಲಾಗಿ ಅವರ ಕಟುಂಬದ ಸದಸ್ಯರು ನೀಡುವ ಮಾಹಿತಿ ದಾಖಲಿಸಿಕೊಳ್ಳಬೇಕು. ಯಾವುದಾದರೂ ಒಂದು ಗುರುತಿನ ಚೀಟಿ ಅಥವಾ ವಾಸಸ್ಥಳದ ದಾಖಲೆ ಆಧರಿಸಿ ಸಮೀಕ್ಷೆಯಲ್ಲಿ ಪರಿಗಣಿಸಬೇಕು. ಗುಳೆ ಕಾರ್ಮಿಕರು ಸಮೀಕ್ಷೆಯಿಂದ ಹೊರಗುಳಿದರೆ ಬಂಜಾರಾ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ಸಮಾಜ ಬಾಂಧವರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಮ್ಮ ಅಭಿಪ್ರಾಯ ಆಲಿಸಿದ ನ್ಯಾಯಮೂರ್ತಿಗಳು ಸಮೀಕ್ಷೆ ಸರಳೀಕರಣದ ಭರವಸೆ ನೀಡಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಪ್ರಜಾವಾಣಿಗೆ ತಿಳಿಸಿದರು.

‘ಪ್ರತಿ ಮನೆ ಭೇಟಿ, ಬೂತ್‌ ಮಟ್ಟದಲ್ಲಿ ಕುಳಿತು ಸಾರ್ವಜನಿಕರಿಂದ ಮನವಿ ಸ್ವೀಕಾರ, ಸಮೀಕ್ಷೆಯಲ್ಲಿ ಸೇರ್ಪಡೆ ಮತ್ತು ಆನ್‌ಲೈನ್ ಮೂಲಕವೂ ನಡೆಸುತ್ತಿರುವುದರಿಂದ ಗುಳೆ ಕಾರ್ಮಿಕರು ಇವುಗಳ ಪ್ರಯೋಜನ ಪಡೆಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.