
ಕಮಲಾಪುರ: ಕಾಳಗಿ ತಾಲ್ಲೂಕಿನಿಂದ ಬೇರ್ಪಟ್ಟು ಕಮಲಾಪುರ ತಾಲ್ಲೂಕಿಗೆ ಸೇರ್ಪಡೆಯಾದ ಅರಣಕಲ್ ಗ್ರಾಮ ಪಂಚಾಯಿತಿಯ ಗ್ರಾಮಗಳ ಎಲ್ಲ ದಾಖಲೆಗಳನ್ನು ಕಮಲಾಪುರ ತಾಲ್ಲೂಕಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಬುಧವಾರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಮೃತ ಗೌರೆ ನೇತೃತ್ವದಲ್ಲಿ ಅರಣಕಲ್ ಗ್ರಾಮಸ್ಥರು ಇಲ್ಲಿನ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ರೇವಣಸಿದ್ದೇಶ್ವರ ದೇವಸ್ಥಾನ ಸೇಡಂ ಉಪ ವಿಭಾಗ ಅಡಳಿತಾಧಿಕಾರಿಯಿಂದ ಬೇರ್ಪಡಿಸಿ ಕಲಬುರ್ಗಿ ಉಪ ವಿಭಾಗ ಆಡಳಿತಾಧಿಕಾರಿ ವ್ಯಾಪ್ತಿಗೆ ಸೇರಿಸಬೇಕು. ಕೃಷಿ ಇಲಾಖೆಯ ದಾಖಲೆಗಳನ್ನು ಕಮಲಾಪುರಕ್ಕೆ ವರ್ಗಾಯಿಸಬೇಕು. ಪೊಲೀಸ್, ಪಂಚಾಯತರಾಜ, ತೋಟಗಾರಿಕೆ, ಶಿಕ್ಷಣ ಮತ್ತಿತರ ಕಡತಗಳು ಕಾಳಗಿ ವ್ಯಾಪ್ತಿಯಲ್ಲೆ ಉಳಿದಿವೆ. ಸರ್ಕಾರದ ಸೌಕರ್ಯ ಪಡೆಯಲು ಸಾರ್ವಜನಿಕರಿಗೆ ಎಲ್ಲಿದ ತೊಂದರೆಯಾಗುತ್ತಿದೆ. ಕಾಳಗಿಯಿಂದ ಕಮಲಾಪುರ, ಕಮಲಾಪುರದಿಂದ ಕಾಳಗಿ ಅಲೆಯುವುದೇ ನಿತ್ಯ ಕೆಲಸವಾಗಿದೆ’ ಎಂದರು.
‘ಕಮಲಾಪುರದಿಂದ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ನಿತ್ಯ ಬಸ್ ಸಂಚಾರಿಸಲು ಕ್ರಮ ಕೈಗೊಳ್ಳಬೇಕು. ಕಮಲಾಪುರದಿಂದ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಜೀವಣಗಿ ರಸ್ತೆ ಬಳಿ ದ್ವಾರ ಬಾಗಿಲು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ಈ ಕುರಿತು ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಕ್ರಮ ಕೈಗೊಂಡಿಲ್ಲ. ನಿರ್ಲಕ್ಷ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿ ತಡೆದಯ ಪ್ರತಿಭಟನೆ ನಡೆಸುವುದಾಗಿ ಅಮೃತ ಗೌರೆ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.