ADVERTISEMENT

ಕಲಬುರ್ಗಿ ಕೋಟೆಯ ಅಕ್ರಮವಾಸಿಗಳ ತೆರವಿಗೆ ಪುರಾತತ್ವ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 11:53 IST
Last Updated 30 ಜನವರಿ 2020, 11:53 IST
ಐತಿಹಾಸಿಕ ಕಲಬುರ್ಗಿ ಕೋಟೆಯೊಳಗೆ ನಿರ್ಮಾಣವಾಗಿರುವ ಮನೆಗಳು.
ಐತಿಹಾಸಿಕ ಕಲಬುರ್ಗಿ ಕೋಟೆಯೊಳಗೆ ನಿರ್ಮಾಣವಾಗಿರುವ ಮನೆಗಳು.   

ಬೆಂಗಳೂರು:ಐತಿಹಾಸಿಕಕಲಬುರ್ಗಿ ಕೋಟೆಯ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿನ 282 ಒತ್ತುವರಿದಾರರು ಹಾಗೂ ಅಕ್ರಮ ವಾಸಿಗಳನ್ನು ತೆರವುಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.

‘ನಮ್ಮ ಆದೇಶದ ಅನ್ವಯಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

‘ಘೋಷಿತ ಸ್ಮಾರಕ ಎನಿಸಿರುವ ಕಲಬುರ್ಗಿಯ ಐತಿಹಾಸಿಕ ಕೋಟೆ ಪ್ರದೇಶ ವ್ಯಾಪ್ತಿಯಲ್ಲಿನ ಒತ್ತುವರಿ ತೆರವುಗೊಳಿಸಲು ಕಲಬುರ್ಗಿ ಜಿಲ್ಲಾಧಿಕಾರಿ 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ಕಳೆದ ಡಿ.11ರಂದು ಆದೇಶಿಸಿತ್ತು.

ADVERTISEMENT

ಕೋಟೆಯೊಳಗಿನ ಅನಧಿಕೃತ ಕಟ್ಟಡ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಕಲಬುರ್ಗಿ ವರದಿ: ನಗರದ ಐತಿಹಾಸಿಕ ಕೋಟೆಯ ಒಳಗೆ ಅನಧೊಕೃತವಾಗಿ ವಾಸವಾಗಿರುವ 282 ಕುಟುಂಬಗಳ ಕಟ್ಟಡಗಳನ್ನು ತೆರವುಗೊಳಿಸುವಂತೆ ಬೆಂಗಳೂರಿನ ರಾಜ್ಯ ಹೈಕೋರ್ಟ್‌ ಆದೇಶ ಹೊರಡಿಸಿದೆ. ಹೀಗಾಗಿ ಕೋಟೆಯ ಒಳಗೆ ಅನಧಿಕೃತವಾಗಿ ವಾಸವಾಗಿರುವ ಎಲ್ಲ ಕುಟುಂಬಗಳು ಸ್ವಯಂ ಪ್ರೇರಿತವಾಗಿ ತಮ್ಮ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಆ ಸ್ಥಳವನ್ನು ಖಾಲಿ ಮಾಡುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ನಿವಾಸಿಗಳು ಸೂಚನೆ ನೀಡಿದ್ದಾರೆ.

ಖಾಲಿ ಮಾಡದೇ ಇದ್ದಲ್ಲಿ ಜಿಲ್ಲಾಡಳಿತದಿಂದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡಗಳ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿನ್ನೆಲೆ

ಕೋಟೆಯೊಳಗಿನ ‘ಒತ್ತುವರಿದಾರರನ್ನು ತೆರವುಗೊಳಿಸಬೇಕು’ ಎಂದು ಕೋರಿ ಎಂ.ಎಸ್‌.ಶರಣ್ ದೇಸಾಯಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದನ್ಯಾಯಮೂರ್ತಿ ರವಿ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ, ತೆರವು ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿತ್ತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಸಿ.ಶಶಿಕಾಂತ್, ‘ಒತ್ತುವರಿ ತೆರವುಗೊಳಿಸಲು ಸರ್ವೇಕ್ಷಣಾ ಮತ್ತು ಪುರಾತತ್ವ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ನೋಟಿಸ್ ಅನ್ವಯ ಹದಿನೈದು ದಿನಗಳಲ್ಲಿ ತೆರವುಗೊಳಿಸಬೇಕು ಎಂದು ತಿಳಿಸಿತ್ತು. ಆದರೆ, ಇನ್ನೂ ತೆರವುಗೊಳಿಸಿಲ್ಲ’ಎಂದು ವಿವರಿಸಿದರು.

ಆಕ್ಷೇಪಣೆ ಏನು?:‘ಮಾಹಿತಿ ಹಕ್ಕು ಕಾಯ್ದೆ ಅಡಿ 2011ರಲ್ಲಿ ಪಡೆದುಕೊಂಡಿರುವ ಮಾಹಿತಿಯಂತೆ ಕಲಬುರ್ಗಿ ಕೋಟೆಯ ಒಳಗೆ ಮತ್ತು ಹೊರಗೆ 194 ಕುಟುಂಬಗಳು ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನೆಲೆಸಿವೆ. ಈ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಅಥವಾ ಸ್ಥಳೀಯ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.