ADVERTISEMENT

ಖರ್ಗೆ ಕುಟುಂಬದ ವಿರುದ್ಧ ಹಗುರ ಮಾತು ಸಲ್ಲದು: ಅರ್ಜುನ ಭದ್ರೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 15:51 IST
Last Updated 18 ಮಾರ್ಚ್ 2024, 15:51 IST
ಅರ್ಜುನ ಭದ್ರೆ
ಅರ್ಜುನ ಭದ್ರೆ   

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಮುಖಂಡರಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.

‘ಅಸ್ಪೃಶ್ಯ ಸಮುದಾಯದವರೊಬ್ಬರು ರಾಷ್ಟ್ರೀಯ ಮಟ್ಟದ ಪಕ್ಷದ ಅಧ್ಯಕ್ಷರು ಆಗಿರುವುದಕ್ಕೆ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಖರ್ಗೆ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಮೋದಿ ಅವರಿಗೆ ಕಲಬುರಗಿಗೆ ಬಂದು ಚುನಾವಣೆ ಪ್ರಚಾರ ಮಾಡಲು ಯಾವ ನೈತಿಕತೆ ಇದೆ? ರಾಜ್ಯದ ಪಾಲಿನ ಅನುದಾನ ಕೊಡುತ್ತಿಲ್ಲ. ಬಜೆಟ್‌ನಲ್ಲಿ ನಮ್ಮ ಭಾಗಕ್ಕೆ ಯಾವುದೇ ಹೊಸ ಯೋಜನೆ ನೀಡಲಿಲ್ಲ. ಬರೀ ಹುಸಿ ಮಾತುಗಳನ್ನು ಆಡಿ ಹೋಗಿದ್ದಾರೆ’ ಎಂದರು.

ADVERTISEMENT

‘ವಿ.ಪಿ. ಸಿಂಗ್ ಅವರು ಮಂಡಲ್ ವರದಿ ಜಾರಿ ಮಾಡಿದ ನಂತರ ಹಿಂದುಳಿದ ವರ್ಗಕ್ಕೆ ಶೇ 27ರಷ್ಟು ಮೀಸಲಾತಿ ನೀಡಲು ಮುಂದಾಗಿದ್ದರು. ಇದರ ವಿರುದ್ಧ ಗದ್ದಲ ಎಬ್ಬಿಸಿ ಗಲಭೆಗೆ ಪ್ರಚೋದನೆ ನೀಡಿದ್ದು ಆರ್‌ಎಸ್‌ಎಸ್‌ ಮುಖಂಡರು. ಲಾಲ್‌ಕೃಷ್ಣ ಅಡ್ವಾಣಿ ಅವರು ರಥಯಾತ್ರೆ ನಡೆಸಿ ಬಾಬರಿ ಧ್ವಂಸ ಮಾಡಿಸಿದರು. ಅಂದಿನ ಕೋಮುದ್ವೇಷ ಇಂದಿಗೂ ಹಬ್ಬುತ್ತಿದೆ’ ಎಂದು ಆರೋಪಿಸಿದರು.

‘ರಥಯಾತ್ರೆ ಮಾಡಿ ಕೋಮುವಾದದ ಬಣ್ಣ ಬಳಿದು ಸಾವಿರಾರು ಜನರ ಸಾವಿಗೆ ಕಾರಣರಾದ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು ಎಷ್ಟು ಸರಿ? ಶೋಷಿತ ವರ್ಗದವರಿಗೆ ಹಕ್ಕುಗಳನ್ನು ಕೊಟ್ಟು, ಭೂಸುಧಾರಣೆ ಜಾರಿಗೆ ತಂದ ಮಾಜಿ ಸಿಎಂ ದೇವರಾಜ ಅರಸು ಹಾಗೂ ಅನ್ನ, ಅಕ್ಷರ ದಾಸೋಹದ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಏಕೆ ಭಾರತ ರತ್ನ ನೀಡಲಿಲ್ಲ’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಖಜಾಂಚಿ ಸೂರ್ಯಕಾಂತ ಆಜಾದಪುರ, ಮುಖಂಡರಾದ ಸೈಬಣ್ಣ ಜಿ.ಕೊಟನೂರಕರ್, ಕಪಿಲ್ ಸಿಂಗೆ, ಮಹೇಶ ಕೋಕಿಲೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.