ADVERTISEMENT

ಅಥ್ಲೆಟಿಕ್ಸ್‌: ಅಕ್ಕಮಹಾದೇವಿ ಮಹಿಳಾ ವಿವಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

19ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:32 IST
Last Updated 8 ನವೆಂಬರ್ 2025, 5:32 IST
ಕಲಬುರಗಿಯಲ್ಲಿ ನಡೆದ 19ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕ್ರೀಡಾಪಟುಗಳಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯ ಟ್ರೋಫಿ ವಿತರಿಸಲಾಯಿತು
ಕಲಬುರಗಿಯಲ್ಲಿ ನಡೆದ 19ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕ್ರೀಡಾಪಟುಗಳಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯ ಟ್ರೋಫಿ ವಿತರಿಸಲಾಯಿತು   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಮೂರು ದಿನ ನಡೆದ 19ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ 64 ಅಂಕಗಳೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.

ನಗರದ ರೇಷ್ಮಿ ಎಜುಕೇಶನ್ ಆ್ಯಂಡ್‌ ಚಾರಿಟಬಲ್ ಟ್ರಸ್ಟ್‌ನ ಕು.ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಥ್ಲೆಟಿಕ್ಸ್‌ ಕ್ರೀಡಾಕೂಟ ಆಯೋಜಿಸಲಾಗಿತ್ತು. ಗುಲಬರ್ಗಾ ವಿವಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ರಾಣೆಬೆನ್ನೂರು ಕೆ.ಎಲ್.ಇ. ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯ 27 ಅಂಕಗಳೊಂದಿಗೆ ರನ್ನರ್‌ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 26 ಅಂಕ ಗಳಿಸಿದ ಧಾರವಾಡದ ಕೆ.ಎಸ್.ಜಿಗಳೂರು ಕಾಲೇಜು 2ನೇ ರನ್ನರ್‌ ಅಪ್ ಪ್ರಶಸ್ತಿ ಪಡೆಯಿತು.

ADVERTISEMENT

ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದಿಶಾ ನೆಟ್ವವಾಡೆ 33.50 ಮೀಟರ್ ದೂರ ಎಸೆದು ದಾಖಲೆ ನಿರ್ಮಿಸಿದ್ದಾರೆ.

ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಶ್ವರ್ಯ ಎಂ.ಆರ್. ಅವರು 27.30 ಮೀಟರ್ ದೂರ ಎಸೆದು ದಾಖಲೆ ಮಾಡಿದ್ದಾರೆ.

20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಎಸ್‌ಜೆಎಂವಿ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಭೀಮವ್ವ ಮಲಗೊಂಡ್ 2:33:23.50 ಸಮಯದಲ್ಲಿ ನಡೆದು ದಾಖಲೆ ಬರೆದಿದ್ದಾರೆ.

ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ: ವಿಜಯಪುರ ಬಿಡಿಇಎಸ್‌ ಮಹಿಳಾ ಪದವಿ ಮಹಾವಿದ್ಯಾಲಯದ ಯಲ್ಲಮ್ಮ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯ ದಾನಮ್ಮ ಪೂಜಾರಿ, ಧಾರವಾಡದ ಕೆ.ಎಸ್.ಜಿಗಳೂರು ಆರ್ಟ್ಸ್ ಮತ್ತು ಎಸ್.ಎಂ. ಶೇಷಗಿರಿ ಕಾಮರ್ಸ್‌ ಮಹಿಳಾ ಕಾಲೇಜಿನ ಅಕ್ಷತಾ ಮುರುಗೇಂದ್ರ ಅಂಗಡಿ ಈ ಮೂವರು ಕ್ರೀಡಾಪಟುಗಳು ಸಮನಾದ ಅಂಕಗಳನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

‘ಸದೃಢ ಮನಸ್ಸಿದ್ದರೆ ಸಾಧನೆ ಸಾಧ್ಯ’

‘ಇಂದಿನ ಮಹಿಳೆಯರು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರುತ್ತಿರುವುದು ಹೆಮ್ಮೆಯ ವಿಷಯ. ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇದ್ದರೆ ಕ್ರೀಡೆಯಲ್ಲಿ ಸಾಧನೆ ಸಾಧ್ಯ’ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ವಿಜಯಾ ಬಿ.ಕೋರಿಶೆಟ್ಟಿ ಹೇಳಿದರು.

19ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಜ್ಯೋತಿ ದಮ್ಮ ಪ್ರಕಾಶ ಮಾತನಾಡಿ ‘ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳು ಚಾಂಪಿಯನ್ನರೇ. ಆದರೆ ಸತತ ಪ್ರಯತ್ನ ಮಾಡಿದಾಗ ಸಾಧನೆಯ ಹಾದಿ ಸುಗಮವಾಗುತ್ತದೆ’ ಎಂದರು.

ಕು.ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗೀತಾ ಆರ್.ಎಂ. ಅಧ್ಯಕ್ಷತೆ ವಹಿಸಿದ್ದರು. ಗುಲಬರ್ಗಾ ವಿವಿ ಸಿಂಡಿಕೇಟ್‌ ಸದಸ್ಯ ಉದಯಕುಮಾರ ಪಾಟೀಲ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ ದೈಹಿಕ ಶಿಕ್ಷಣ ವಿಭಾಗದ ಡೀನ್‌ ಸಕ್ಪಾಲ್‌ ಹೂವಣ್ಣ ರೇಷ್ಮಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶರದ್ ಎನ್.ರೇಷ್ಮಿ ಟ್ರಸ್ಟಿ ಶಿಶಿರ ಎನ್.ರೇಷ್ಮಿ ಗುಲಬರ್ಗಾ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜಗನ್ನಾಥ ಪಟ್ಟಣಕರ್‌ ಕ್ರೀಡಾಕೂಟದ ಸಂಯೋಜಕ ಸಂಗಣ್ಣ ಕೆ. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.