ADVERTISEMENT

ಚಿಂಚೋಳಿ | ಪಿಡಿಒ ಮೇಲೆ ಹಲ್ಲೆ: ನೌಕರರ ಪ್ರತಿಭಟನೆ 

ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲು  ಶಾದಿಪುರ ಪೊಲೀಸರ ಸಮ್ಮುಖದಲ್ಲಿಯೇ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:47 IST
Last Updated 21 ಏಪ್ರಿಲ್ 2025, 15:47 IST
ಚಿಂಚೋಳಿ ತಾಲ್ಲೂಕು ಶಾದಿಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಸರ್ಕಾರಿ ನೌಕರರು ಹಾಗೂ ಪಂಚಾಯತ್‌ ರಾಜ್ ಇಲಾಖೆ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು
ಚಿಂಚೋಳಿ ತಾಲ್ಲೂಕು ಶಾದಿಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಸರ್ಕಾರಿ ನೌಕರರು ಹಾಗೂ ಪಂಚಾಯತ್‌ ರಾಜ್ ಇಲಾಖೆ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು    

ಚಿಂಚೋಳಿ: ತಾಲ್ಲೂಕಿನ ಶಾದಿಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೆಗೌಡ ಅವರ ಮೇಲೆ ಗ್ರಾ.ಪಂ. ಕಚೇರಿಯಲ್ಲಿಯೇ ಪೊಲೀಸರ ಸಮ್ಮುಖದಲ್ಲಿ ಹಲ್ಲೆ ಮಾಡಿದ ಘಟನೆ ಏ.19ರಂದು ಶನಿವಾರ ನಡೆದಿದೆ.

ಗ್ರಾ.ಪಂ.ವ್ಯಾಪ್ತಿಯ ಚಾಪ್ಲಾನಾಯಕ ತಾಂಡಾದಲ್ಲಿ ಎದುರಾದ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ನನ್ನ ಜತೆಗೆ ಮೊಬೈಲ್‌ನಲ್ಲಿ ಮಾತನಾಡಿದ ಆರೋಪಿ ವಾಲೋಜಿ ರಾಠೋಡ್ ಅವಾಚ್ಯವಾಗಿ ನಿಂದಿಸಿದರಲ್ಲದೇ ಕಚೇರಿಗೆ ಬಂದು ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಹಲ್ಲೆಗೊಳಗಾದ ಪಿಡಿಒ ಶ್ರೀಧರ ಜವರೆಗೌಡ ಕುಂಚಾವರಂ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಸಬ್ ಇನ್‌ಸ್ಪೆಕ್ಟರ್‌ ವೆಂಕಟೇಶ ನಾಯಕ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಾಲೋಜಿ ರಾಠೋಡ್ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಎದುರು ಹಾಜರು ಪಡಿಸಿದರು.

ಪ್ರತಿಭಟನೆ: ಕರ್ತವ್ಯ ನಿರತ ಪಿಡಿಒ ಮೇಲೆ ಹಲ್ಲೆ ನಡೆಸಿದ ಪ್ರಕರಣ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಘಟನೆಯನ್ನು ಖಂಡಿಸಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ಆರೋಪಿಯನ್ನು ಬಂಧಿಸಿ ಗಡಿಪಾರು ಮಾಡಬೇಕು. ಸರ್ಕಾರಿ ನೌಕರರು ನಿರ್ಭಯವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ್, ರಾಜ್ಯ ಪರಿಷತ್ ಸದಸ್ಯ ಮಲ್ಲಿಕಾರ್ಜುನ ಪಾಲಾಮೂರ, ನಿರ್ದೇಶಕ ಜಗನ್ನಾಥರೆಡ್ಡಿ ಚಟ್ನಳ್ಳಿ, ಪಿಡಿಒ ಸಂಘದ ಅಧ್ಯಕ್ಷ ಪವನಕುಮಾರ ಸೇರಿದಂತೆ ವಿವಿಧ ಇಲಾಖೆ ನೌಕರರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.