ವಾಡಿ: ಖಾಸಗಿ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿ, ಹಣ ದೋಚಿದ ಘಟನೆ ರಾವೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ ರಾಜ್ಯದ 24 ಪರಗಣ ಜಿಲ್ಲೆಯ ಶಂಕರ ನಾರಾಯಣ ಮಂಡಲ ಎಂಬ ವೈದ್ಯ ಹಲ್ಲೆಗೊಳಗಾಗಿದ್ದು, ರಾವೂರಿನ ಮೌಲಾ ಗಪೂರ ಅಡಕಿ, ಮೋಹಸಿನ ಛೋಟುಮಿಯ್ಯ ಆಡಕಿ ಎಂಬುವವರು ಹಲ್ಲೆಗೈದವರು.
ಶಂಕರ ನಾರಾಯಣ ಅವರು, ‘ಕಳೆದ 8 ವರ್ಷಗಳಿಂದ ರಾವೂರಿನಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ ಸುಮಾರು 10:30ಕ್ಕೆ ಮೌಲಾ ಗಫೂರ, ಮೋಹಸಿನ್ ಎಂಬುವವರು ಬಿಪಿ ಹಾಗೂ ಹೊಟ್ಟೆ ನೋವಿಗೆ ಚಿಕಿತ್ಸೆ ತೆಗೆದುಕೊಳ್ಳಲು ಕ್ಲಿನಿಕ್‌ಗೆ ಬಂದಿದ್ದಾರೆ. ಈಗಾಗಲೇ ಕಲಬುರಗಿಯಲ್ಲಿ ಚಿಕಿತ್ಸೆ ಪಡೆದಿದ್ದರಿಂದ ಕಲಬುರಗಿಗೆ ಹೋಗಲು ವೈದ್ಯರು ತಿಳಿಸಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆದು ಜಗಳ ಆರಂಭಗೊಂಡಿದೆ. ಬಳಿಕ ಇಬ್ಬರು ಆಸ್ಪತ್ರೆ ಬಾಗಿಲು ಮುಚ್ಚಿ, ಬಾಯಿಗೆ ಬಟ್ಟೆ ತುರುಕಿ ಬೆನ್ನು, ಭುಜ, ಮುಖ, ಹೊಟ್ಟೆಗೆ ಹೊಡೆದಿದ್ದಾರೆ. ಅಲ್ಲದೆ ಜೇಬಿನಲ್ಲಿದ್ದ ₹13 ಸಾವಿರ ಕಿತ್ತುಕೊಂಡಿದ್ದಾರೆ. ರಾವೂರಿನಲ್ಲಿ ಇರಬೇಕಾದರೆ ಪ್ರತಿ ತಿಂಗಳು ಹಫ್ತಾ ನೀಡಬೇಕು. ಇಲ್ಲದಿದ್ದರೆ ಊರು ಖಾಲಿ ಮಾಡು ಎಂದು ಬೆದರಿಕೆ ಹಾಕಿದ್ದಾರೆ ಎಂದು ವೈದ್ಯ ಶಂಕರ ನಾರಾಯಣ ವಾಡಿ ಠಾಣೆಗೆ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪಿಎಸ್ಐ ಮಂಜುನಾಥರೆಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.