ADVERTISEMENT

ಕಲಬುರಗಿ: 100 ಹಾಸಿಗೆ ಸಾಮರ್ಥ್ಯದ ಆಕ್ಸಿಲೈಫ್ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:45 IST
Last Updated 13 ಅಕ್ಟೋಬರ್ 2025, 5:45 IST
ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದ ಬಳಿಯ ಆಕ್ಸಿಲೈಫ್‌ ಆಸ್ಪತ್ರೆಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಉದ್ಘಾಟಿಸಿದರು
ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದ ಬಳಿಯ ಆಕ್ಸಿಲೈಫ್‌ ಆಸ್ಪತ್ರೆಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಉದ್ಘಾಟಿಸಿದರು    

ಕಲಬುರಗಿ: ನಗರದ ಕೇಂದ್ರ ಬಸ್‌ ನಿಲ್ದಾಣ ಎದುರು ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಆಕ್ಸಿಲೈಫ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಉದ್ಘಾಟಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಡಾ.ಪ್ರಿಯಾ ಮತ್ತು ಡಾ.ಅನ್ಮೋಲ ಅವರು ಆಕ್ಸಿಲೈಫ್‌ ಆಸ್ಪತ್ರೆಯನ್ನು ಬಹಳ ಸುಂದರವಾಗಿ ಕಟ್ಟಿಸಿದ್ದಾರೆ. ಗುಣಮಟ್ಟದ ವೈದ್ಯಕೀಯ ಉಪಕರಣಗಳು, ಸೌಲಭ್ಯಗಳಿವೆ’ ಎಂದು ಶ್ಲಾಘಿಸಿದರು.

‘ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಗರ. ಈ ಪ್ರದೇಶದ ಬೆಳವಣಿಗೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಅಪಾರವಾಗಿದೆ. ಆರ್ಟಿಕಲ್‌ 371(ಜೆ) ಜಾರಿಗೊಳಿಸಿದ್ದರಿಂದ ದೊಡ್ಡಪ್ರಮಾಣದಲ್ಲಿ ಡಾಕ್ಟರ್‌ ಮತ್ತು ಎಂಜಿನಿಯರ್‌ಗಳಾಗುತ್ತಿದ್ದಾರೆ’ ಎಂದರು.

ADVERTISEMENT

ಬೆಂಗಳೂರಿನ ಮಾಜಿ ಮೇಯರ್‌ ಸಂಪತ್‌ ರಾಜ್‌ ಮಾತನಾಡಿ, ‘ಡಾ.ಚಂದ್ರಕಾಂತ ಗದ್ದಗಿ ಅವರು ಸಣ್ಣಕುಟುಂಬದಿಂದ ಬಂದರೂ ತಮ್ಮ ಶ್ರಮದಿಂದ ಬೀದರ್‌ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಈಗ ಆಸ್ಪತ್ರೆ ಸ್ಥಾಪಿಸಿದ್ದಾರೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ‘ಆಕ್ಸಿಲೈಫ್‌ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಸಿಗುವುದರಿಂದ ಜಿಲ್ಲೆಯ ನಾಗರಿಕರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಪ್ರಿಯಾ ಗದ್ದಗಿ ಮೋದಿ ಮಾತನಾಡಿ, ‘16 ಹಾಸಿಗೆಯ ಐಸಿಯು ಒಳಗೊಂಡ ಈ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ರೋಗಿಗಳಿಗೆ ದೊರೆಯಲಿವೆ’ ಎಂದರು.

ವಸಂತಾ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಶನ್ಸ್‌ ಅಧ್ಯಕ್ಷ ಚಂದ್ರಕಾಂತ ಗದ್ದಗಿ, ಕಾರ್ಯದರ್ಶಿ ಪ್ರೊ. ಚಿನ್ನಮ್ಮ ಗದ್ದಗಿ, ನಾಗಪುರದ ಡಾ.ಚಂದ್ರಕಾಂತ, ಶಿವಶರಣಪ್ಪ ಗದ್ದಗಿ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅನ್ಮೋಲ ಮೋದಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್‌ ಮೆಹಮೂದ್‌ ಚಿಸ್ತಿ, ಕಾಂಗ್ರೆಸ್‌ ಮುಖಂಡ ಮಹಾಂತಪ್ಪ ಸಂಗಾವಿ ಉಪಸ್ಥಿತರಿದ್ದರು. ದಿನೇಶ್‌ ಮೈನಾಳಕಾರ್‌ ನಿರೂಪಿಸಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್‌ ಫಾತಿಮಾ ಅವರು ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.