ADVERTISEMENT

ಕಲಬುರಗಿ: ಆಯುಧ ಪೂಜೆ ಸಂಭ್ರಮ; ಬನ್ನಿ ವಿನಿಮಯ ಸಡಗರ

ಹತ್ತು ದಿನಗಳ ಕಾಲ ದೇವಿ ಆರಾಧನೆ, ವ್ರತಾಚರಣೆ ಸಂಭ್ರಮದಲ್ಲಿ ಮಿಂದೆದ್ದ ಜನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:35 IST
Last Updated 3 ಅಕ್ಟೋಬರ್ 2025, 6:35 IST
ಕಲಬುರಗಿಯ ಪ್ರಶಾಂತ ನಗರದಲ್ಲಿರುವ 12 ಜ್ಯೋತಿರ್ಲಿಂಗ ದೇವಸ್ಥಾನದ ಕಮಿಟಿಯಿಂದ ದಸರಾ ಹಬ್ಬದ ಅಂಗವಾಗಿ ರಾಜಾಪುರ ರಿಂಗ್‌ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗುರುವಾರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು
ಕಲಬುರಗಿಯ ಪ್ರಶಾಂತ ನಗರದಲ್ಲಿರುವ 12 ಜ್ಯೋತಿರ್ಲಿಂಗ ದೇವಸ್ಥಾನದ ಕಮಿಟಿಯಿಂದ ದಸರಾ ಹಬ್ಬದ ಅಂಗವಾಗಿ ರಾಜಾಪುರ ರಿಂಗ್‌ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗುರುವಾರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು   

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು ಹಾಗೂ ಭಕ್ತರ ಮನೆಗಳಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ದೇವಿ ಆರಾಧನೆಯು ಬುಧವಾರ ಆಯುಧ ಪೂಜೆ ಹಾಗೂ ಗುರುವಾರ ವಿಜಯದಶಮಿ ಆಚರಣೆಯೊಂದಿಗೆ ಸಂಪನ್ನಗೊಂಡಿತು.

ವಿಜಯದಶಮಿಯ ದಿನವಾದ ಗುರುವಾರ ಬೆಳಿಗ್ಗೆಯಿಂದಲೇ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ‌ಪ್ರಮುಖವಾಗಿ ಅಂಬಾಭವಾನಿ ದೇವಸ್ಥಾನ, ಯಲ್ಲಮ್ಮ ದೇವಿ ದೇವಸ್ಥಾನ, ಹಿಂಗುಲಾಂಬಿಕಾ ದೇವಿ ದೇವಸ್ಥಾನ, ಜಗದಂಬಾ ದೇವಸ್ಥಾನ, ಸಿಂದಗಿಯ ಅಂಬಾಭವಾನಿ ದೇವಸ್ಥಾನ, ವೈಷ್ಣೋದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳ ಸಂಭ್ರಮ ಕಂಡುಬಂತು. 

ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸಿ, ಸಿಂಗಾರಗೊಂಡು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ನೈವೇದ್ಯ ಅರ್ಪಿಸಿ ಭಕ್ತಿ ಮರೆದರು. ಮಧ್ಯಾಹ್ನ ಹಬ್ಬದ ಅಂಗವಾಗಿ ಹೋಳಿಗೆ ಊಟ ಸವಿದರು. 

ADVERTISEMENT

ಸಂಜೆ ಹೊತ್ತಿಗೆ ಬನ್ನಿ ಮರಕ್ಕೆ (ಶಮಿ ವೃಕ್ಷ) ತಂಡೋಪತಂಡವಾಗಿ ತೆರಳಿದ ಜನರು, ಶ್ರದ್ಧಾ–ಭಕ್ತಿಯಿಂದ ಪೂಜೆ ಸಲ್ಲಿಸಿದರು. ಬನ್ನಿ ಮರದ ಎಲೆಗಳನ್ನು ಕೊಟ್ಟು ‘ಬನ್ನಿ ಬಂಗಾರವಾಗಲಿ, ನಾವು–ನೀವು ಬಂಗಾರದಂತೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಆಯುಧ ಪೂಜೆ: ಆಯುಧ ಪೂಜಾ ದಿನವಾದ ಬುಧವಾರ ಮನೆಗಳಲ್ಲಿ ಅಗಲಿದ ಹಿರಿಯರಿಗೆ ಹೊಸಬಟ್ಟೆ ಇರಿಸಿ ಪೂಜಿಸಿದರು. ತಾವು ಬಳಸುವ ವಾಹನಗಳು, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಕ್ಯಾಮೆರಾ, ಪೆನ್ನು ಸೇರಿದಂತೆ ಕೆಲಸಕ್ಕೆ ಬಳಸುವ ಪರಿಕರಗಳು ಹಾಗೂ ಆಯುಧಗಳನ್ನು ಶುಚಿಗೊಳಿಸಿ ಪೂಜಿಸಿದರು. ಕೃಷಿಕರು ತಮ್ಮ ಮನೆಗಳಲ್ಲಿನ ಕೂರಿಗೆ, ಕುಂಟೆ, ರೆಂಟೆ, ಕುಡುಗೋಲು, ಕುರ್ಪಿ, ಬಂಡಿ ಸೇರಿದಂತೆ ಎಲ್ಲ ಕೃಷಿ ಉಪಕರಣಗಳನ್ನು ಜೋಡಿಸಿ ಪೂಜೆ ಸಲ್ಲಿಸಿದರು.

ಶಸ್ತ್ರಾಸ್ತ್ರಗಳಿಗೆ ಪೂಜೆ:

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಯುಧ ಪೂಜೆಯ ದಿನ ದುರ್ಗಾ ಮಾತೆಯ ಚಿತ್ರವಿಟ್ಟು ಪೂಜಿಸಲಾಯಿತು. ಕಮಿಷನರ್‌ ಶರಣಪ್ಪ ಎಸ್‌.ಡಿ. ಸಾಲಾಗಿ ಇರಿಸಿದ್ದ ಬಂದೂಕುಗಳಿಗೆ ಹೂವಿನಹಾರ ಹಾಕಿ, ಪುಷ್ಪದಳ ಎರಚಿ ಪೂಜೆ ಸಲ್ಲಿಸಿದರು. ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಸಾಥ್‌ ನೀಡಿದರು. ಪೂಜೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ ಸೇರಿದಂತೆ ಹಲವರು ‍ಪಾಲ್ಗೊಂಡಿದ್ದರು.

ಅಂಗಡಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿ, ಸಂಸ್ಥೆಗಳು, ಸಣ್ಣ ಕಾರ್ಖಾನೆಗಳಲ್ಲಿ ಸಿಬ್ಬಂದಿ ಮತ್ತು ಮಾಲೀಕರು ತಮ್ಮ ವಾಹನ ಮತ್ತು ಆಯುಧಗಳಿಗೆ ವಿಶೇಷ ಪೂಜೆ ಮಾಡಿದರು. ಮಹಾನಗರ ಪಾಲಿಕೆಯಿಂದ ವಾಹನಗಳನ್ನು ಅಲಂಕರಿಸಿ, ಪೂಜೆ ಸಲ್ಲಿಸಿದ ಬಳಿಕ ಅವುಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಓಡಿಸಲಾಯಿತು.

ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಸ್ವಚ್ಛಗೊಳಿಸಿ ಕಬ್ಬು, ಬಾಳೆದಿಂಡು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು. ಲಾರಿ, ಪ್ರಯಾಣಿಕ ವಾಹನ, ಕಾರು, ಟ್ರ್ಯಾಕ್ಟರ್‌ಗಳ ಮಾಲೀಕರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಹೂಗಳಿಂದ ಸಿಂಗರಿಸಿ ಆರತಿ ಬೆಳಗಿ ಪೂಜೆ ನೆರವೇರಿಸಿದರು.

ಕಲಬುರಗಿ ನಗರ ಕುಂಬಾರಗಲ್ಲಿಯ ಮಹಾಲಕ್ಷ್ಮಿ ಮಂದಿರದಲ್ಲಿ ದಸರಾ ಉತ್ಸವ ಪ್ರಯುಕ್ತ ದೇವಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಪೂಜೆ ಮಾಡಿದರು. ಮಹಾಲಕ್ಷ್ಮಿ ಟ್ರಸ್ಟ್ ಅಧ್ಯಕ್ಷ ಪದಾಧಿಕಾರಿಗಳು ಭಕ್ತರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು
ನವರಾತ್ರಿ ಉತ್ಸವದ ಅಂಗವಾಗಿ ಕಲಬುರಗಿಯ ಶರಣಬಸವೇಶ್ವರ ಕೆರೆ ಬಳಿಯ ಯಲ್ಮಮ್ಮ ದೇವಸ್ಥಾನದಲ್ಲಿ ಗುರುವಾರ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು ಪ್ರಜಾವಾಣಿ ಚಿತ್ರ
ಕಲಬುರಗಿಯ ಸ್ಟೇಷನ್‌ ಬಜಾರ್‌ ಸಮೀಪದ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ದೇವಿ ಮೂರ್ತಿ ಪ್ರಜಾವಾಣಿ ಚಿತ್ರ
ನವರಾತ್ರಿ ಉತ್ಸವದ ಅಂಗವಾಗಿ ಕಲಬುರಗಿಯ ಹೊಸ ಜೇವರ್ಗಿ ರಸ್ತೆ ಸಿಂದಗಿ ಅಂಬಾಬಾಯಿ ದೇವಸ್ಥಾನದಲ್ಲಿ ಗುರುವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು  ಪ್ರಜಾವಾಣಿ ಚಿತ್ರ
ಕಲಬುರಗಿಯ ಶರಣಬಸವೇಶ್ವರ ಕೆರೆ ಬಳಿಯ ಯಲ್ಮಮ್ಮ ದೇವಸ್ಥಾನದಲ್ಲಿ ಗುರುವಾರ ದೇವಿಯ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಪ್ರಜಾವಾಣಿ ಚಿತ್ರ
ನವರಾತ್ರಿ ಉತ್ಸವದ ಅಂಗವಾಗಿ ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿ ಅಂಬಾ ಭವಾನಿ ದೇವಸ್ಥಾನದಿಂದ ನಡೆದ ದೇವಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಸಂಭ್ರಮ       ಪ್ರಜಾವಾಣಿ ಚಿತ್ರ
ಶರನ್ನವರಾತ್ರಿ ಆಚರಣೆ ಸಂಪನ್ನ | ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ ಜನ | ಮನೆಗಳಲ್ಲಿ ಸಿಹಿ ಭಕ್ಷ್ಯಗಳ ಸವಿ ಭೋಜನ

ನೃತ್ಯದ ಸೊಬಗು

ಮೆರವಣಿಗೆ ಖುಷಿ ಶಕ್ತಿ ಸ್ವರೂಪಿ ದುರ್ಗಾ ದೇವಿಯ ಮೂರ್ತಿಗಳ ಪ್ರತಿಷ್ಠಾಪನೆಯ ಅಂಗವಾಗಿ ನಗರದ ಹಲವೆಡೆ ದಾಂಡಿಯಾ ನೃತ್ಯ ದುರ್ಗಾ ದೌಡ್ ಶೋಭಾಯಾತ್ರೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ಗಮನಸೆಳೆದವು. ಜನಪ್ರತಿನಿಧಿಗಳು ರಾಜಕೀಯ ಮುಖಂಡರು ಉದ್ಯಮಿಗಳು ಅಧಿಕಾರಿಗಳು ಪ್ರತಿಷ್ಠಾಪನೆ ಮಾಡಿದ ದೇವಿಯ ಮೂರ್ತಿಗಳ ದರ್ಶನ ಪಡೆದರು. ವಿಜಯದಶಮಿಯ ಸಂಜೆ ದೇವಿ ಮೂರ್ತಿಗಳ ಅದ್ದೂರಿ ಮೆರವಣಿಗೆ ಜರುಗಿತು. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆಯುಧ ಪೂಜೆ (ಬುಧವಾರ) ಹಾಗೂ ವಿಜಯದಶಮಿಯಂದೂ(ಗುರುವಾರ) ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಕಂಡು ಬಂತು. ಹೂವು ಹಣ್ಣು ಬನ್ನಿ ತಪ್ಪಲು ಕಬ್ಬು ಬಾಳೆ ದಿಂಡು ಬಾಳೆಹಣ್ಣು ಖರೀದಿ ಜೋರಾಗಿತ್ತು. ಶಾಪಿಂಗ್‌ ಮಾಲ್‌ಗಳು ಜವಳಿ ಮಳಿಗೆಗಳಲ್ಲಿ ಬಟ್ಟೆ ಖರೀದಿಗೆ ಜನರು ಮುಗಿಬಿದ್ದಿದ್ದರು. ಆಯುಧ ಪೂಜೆಯ ದಿನ ಹಲವರು ಹೊಸ ವಾಹನಗಳನ್ನು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.