ಕಲಬುರ್ಗಿ: ಗುಲಬರ್ಗಾ ವಿ.ವಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ 26 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಾರ್ಚ್ 7ರಂದು ನಡೆಯಬೇಕಿರುವ ಗಣಿತ ಪ್ರಶ್ನೆಪತ್ರಿಕೆಯನ್ನು ಶುಕ್ರವಾರವೇವಿತರಿಸಲಾಯಿತು.
ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾದರು. ನಂತರ ಬೇರೆ ಪ್ರಶ್ನೆ ಪತ್ರಿಕೆ ನೀಡಲಾಯಿತು. ಈ ಅವಾಂತರದಿಂದಾಗಿ ಪರೀಕ್ಷೆ ಒಂದು ಗಂಟೆ ತಡವಾಯಿತು. ಒಟ್ಟು 4,390 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶುಕ್ರವಾರ ಗಣಿತ ಮೆಥಡ್– 2ರ ಪರೀಕ್ಷೆ ನಡೆಯಬೇಕಿತ್ತು. ಈ ಪ್ರಶ್ನೆಪತ್ರಿಕೆ ಬದಲಾಗಿ ಮೆಥಡ್– 1ರ ಪ್ರಶ್ನೆಪತ್ರಿಕೆ ನೀಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ್, ‘ಬೇರೆ ಪ್ರಶ್ನೆಪತ್ರಿಕೆ ನೀಡಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಅವುಗಳನ್ನು ವಾಪಸ್ ಪಡೆಯಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿಯೇ ಇದ್ದ ಮೆಥಡ್ –2 ಪ್ರಶ್ನೆಪತ್ರಿಕೆಗಳನ್ನು ವಿತರಿಸಲಾಯಿತು. ಮಾ.7ರಂದು ಬೇರೆ ಸೆಟ್ ಪ್ರಶ್ನೆಪತ್ರಿಕೆ ವಿತರಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.