ಚಿತ್ತಾಪುರ: ‘ಕೋಲಿ, ಕಬ್ಬಲಿಗ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಸಮಾಜದ ಭೀಮಣ್ಣಾ ಸಾಲಿ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಪ್ರಭಾವಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿ ಸಮಾಜಕ್ಕೆ ನ್ಯಾಯ ಮತ್ತು ಹಕ್ಕು ಕೊಡಿಸುವಂತೆ ಮನವಿ ಮಾಡುತ್ತೇವೆ’ ಎಂದು ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಭವನದ ಹತ್ತಿರ ತಾಲ್ಲೂಕು ಕೋಲಿ ಸಮಾಜದಿಂದ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಹಾಗೂ ವಿವಿಧ ಶರಣರ ಭಾವಚಿತ್ರಗಳ ಶೋಭಾಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಕೋಲಿ ಕಬ್ಬಲಿಗ ಜಾತಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿದರೆ ಭವಿಷ್ಯದಲ್ಲಿ ಸಮಾಜದ ಜನರು ರಾಜಕೀಯ, ಸಾಮಾಜಿಕ, ಶಿಕ್ಷಣ, ಆರ್ಥಿಕ, ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಮತ್ತು ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಮುಖಂಡ ಭೀಮಣ್ಣಾ ಸಾಲಿ ಮಾತನಾಡಿ, ‘ಕೋಲಿ ಸಮಾಜದ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು. ಸಮಾಜದ ವಿಷಯ ಬಂದಾಗ ಯಾರೂ ಪಕ್ಷಪಾತ, ರಾಜಕೀಯ ಮಾಡದೆ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಸಮಾಜಕ್ಕೆ ನ್ಯಾಯ ಕೊಡಿಸಲು ಹಿಂದೆ ಸರಿಯಬಾರದು’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಮಾತನಾಡಿ, ‘ಕೋಲಿ ಕಬ್ಬಲಿಗ ಜಾತಿಗಳಿಗೆ ಎಸ್.ಟಿ ಸೌಲಭ್ಯ ಒದಗಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಅನ್ಯಾಯ ಮಾಡುತ್ತಲೇ ಬಂದಿವೆ. ಸಂವಿಧಾನ ಬದ್ಧ ಹಕ್ಕು ಪಡೆಯಲು ಒಗ್ಗಟ್ಟಿನಿಂದ ಪ್ರಬಲ ಹೋರಾಟಕ್ಕಿಳಿಯಬೇಕು’ ಎಂದು ಹೇಳಿದರು.
ಮಲ್ಲಣಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಮಲ್ಲಿಕಾರ್ಜುನ ಎಮ್ಮೆನೊರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಲಿ ಸಮಾಜದ ತಾಲ್ಲೂಕು ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ನಗರ ಅಧ್ಯಕ್ಷ ಪ್ರಭು ಹಲಕರ್ಟಿ, ನಗರ ಯುವ ಅಧ್ಯಕ್ಷ ಬಸವರಾಜ ಮೈನಾಳಕರ್, ಪಿಎಸ್ಐ ಶ್ರೀಶೈಲ್ ಅಂಬಾಟಿ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ರಾಮಲಿಂಗ ಬಾನರ, ಸುರೇಶ ಬೆನಕನಳ್ಳಿ, ಹಣಮಂತ ಸಂಕನೂರು, ಶರಣಪ್ಪ ನಾಶಿ, ದೇವಿಂದ್ರ ಕಾರಳ್ಳಿ, ಭೀಮಣ್ಣಾ ಹೋತಿನಮಡಿ, ಸಿದ್ದು ಸಂಗಾವಿ, ರಾಮಲಿಂಗ ನಾಟಿಕಾರ, ನಾಗೇಂದ್ರ ಲಿಂಗಂಪಲ್ಲಿ, ಅಂಬಾರಾಯ ಕಮಲಾಪುರ, ಸಂತೋಷ ತಳವಾರ, ವಕೀಲ ಮಹೇಶ ಮುಕೆ, ಕರಣಕುಮಾರ ಅಲ್ಲೂರ್, ಮುನಿಯಪ್ಪ ಕೊಳ್ಳಿ, ಶರಣು ಡೋಣಗಾಂವ, ಸಂತೋಷ ಮಳಬಾ, ಚಂದ್ರು ಕಾಳಗಿ ಸೇರಿದಂತೆ ಅನೇಕರು ಹಾಜರಿದ್ದರು. ಮುಖಂಡ ದೇವಿಂದ್ರ ಅರಣಕಲ್ ನಿರೂಪಿಸಿದರು.
ಅದ್ದೂರಿ ಶೋಭಾಯಾತ್ರೆ: ತಾಲ್ಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ರಾಜೇಶ ಹೋಳಿಕಟ್ಟಿ ಅವರ ಮುಖಂಡತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಯ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಸಮಾಜದ ಮುಖಂಡರು, ಯುವಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.