ADVERTISEMENT

ಕಲಬುರಗಿ: ಸೋರುವ ಮಾಳಿಗೆ, ಜೋತುಬಿದ್ದ ವಿದ್ಯುತ್ ತಂತಿ ಮಧ್ಯೆ ಪಾಠ!

ಉದನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ

ರಾಮಮೂರ್ತಿ ಪಿ.
Published 7 ಜನವರಿ 2022, 12:32 IST
Last Updated 7 ಜನವರಿ 2022, 12:32 IST
ಉದನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಳಾದ ಬೆಂಚ್‌ಗಳನ್ನು ಮಳೆ ನೀರು ಸೋರುವ ಶಾಲಾ ಕೊಠಡಿಯಲ್ಲಿ ಹಾಕಿರುವುದು
ಉದನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಳಾದ ಬೆಂಚ್‌ಗಳನ್ನು ಮಳೆ ನೀರು ಸೋರುವ ಶಾಲಾ ಕೊಠಡಿಯಲ್ಲಿ ಹಾಕಿರುವುದು   

ಕಲಬುರಗಿ: ನಗರ ಹೊರವಲಯದ ನಂದಿಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶುದ್ಧ ಕುಡಿಯುವ ನೀರಿನ ಸಮಸ್ಯೆ, ಶಿಥಿಲ ಕಟ್ಟಡ, ಕಂಪ್ಯೂಟರ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಒಟ್ಟು 210 ವಿದ್ಯಾರ್ಥಿಗಳು ಇದ್ದಾರೆ. 11 ಪೈಕಿ 2 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇನ್ನುಳಿದ 9 ಕೋಣೆಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಆದರೆ, ಕಟ್ಟಡ ಸೋರುವುದರಿಂದ ಮತ್ತು ವಿದ್ಯುತ್‌ ತಂತಿಗಳು ಅಲ್ಲಲ್ಲಿ ಜೋತು ಬಿದ್ದಿರುವುದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಆಲಿಸಬೇಕು.

ಶಾಲೆಯಲ್ಲಿ ಐವರು ಶಿಕ್ಷಕಿಯರು ಮತ್ತು ಇಬ್ಬರು ಶಿಕ್ಷಕರು ಇದ್ದಾರೆ. ಮುಖ್ಯ ಶಿಕ್ಷಕ ಹುದ್ದೆ ಖಾಲಿಯಿದ್ದು, ಶಿಕ್ಷಕಿಯೊಬ್ಬರು ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಣಿತ, ವಿಜ್ಞಾನ, ಇಂಗ್ಲಿಷ್, ಕನ್ನಡ ಭಾಷೆಯ ಶಿಕ್ಷಕರಿದ್ದು, ಹಿಂದಿ ಭಾಷಾ ಶಿಕ್ಷಕರಿಲ್ಲ. ಬೇರೆ ಶಿಕ್ಷಕರೇ ಹಿಂದಿ ಕಲಿಸುತ್ತಾರೆ.

ADVERTISEMENT

ಅವೈಜ್ಞಾನಿಕ ವೈರಿಂಗ್‌, ಅಪಾಯ: ಶಾಲೆಯ ಕೊಠಡಿಗಳಲ್ಲಿ ಫ್ಯಾನ್‌ ಹಾಗೂ ವಿದ್ಯುತ್ ದೀಪಗಳಿಗೆಅವೈಜ್ಞಾನಿಕವಾಗಿ ವೈರಿಂಗ್‌ ಮಾಡಲಾಗಿದ್ದು, ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಜೋತು ಬಿದ್ದಿವೆ. ವಿದ್ಯಾರ್ಥಿಗಳು ಓಡಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವಾಗುವ ಸಾಧ್ಯತೆ ಇದೆ. ಬಹುತೇಕ ಕೊಠಡಿಗಳಲ್ಲಿನ ಸ್ವಿಚ್‌ಬೋರ್ಡ್‌ ಕೂಡ ಹಾಳಾಗಿವೆ.

‘ಚುನಾವಣೆಗಳು ನಡೆದಾಗ ಮತದಾನಕ್ಕೆ ಶಾಲಾ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆಗ ತಾತ್ಕಾಲಿಕವಾಗಿ ವಿದ್ಯುತ್ ಹಾಗೂ ಫ್ಯಾನ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮತದಾನ ಮುಗಿದ ನಂತರ ವಿದ್ಯುತ್‌ ವೈರಿಂಗ್‌ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಎಲ್ಲೆಂದರಲ್ಲಿ ವಿದ್ಯುತ್‌ ತಂತಿಗಳನ್ನು ಎಳೆದಿರುವುದರಿಂದ ಶಾಲಾ ಕೊಠಡಿಗಳಲ್ಲಿ ಓಡಾಡುವುದೇ ಸವಾಲಾಗಿದೆ’ ಎಂದು ಶಿಕ್ಷಕ ರವಿನಾಯಕ.ಕೆ ತಿಳಿಸಿದರು.

‘ಮಕ್ಕಳು ಆಟ ಆಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ವಿದ್ಯುತ್ ಸ್ಪರ್ಶಿಸಿ ಅಪಾಯವಾಗಬಹುದು. ಒಂದೆರೆಡು ಬಾರಿ ಸಣ್ಣ ಪ್ರಮಾಣದಲ್ಲಿ ಶಾರ್ಟ್‌ ಸರ್ಕಿಟ್‌ ಕೂಡ ಆಗಿವೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಗಮನ ಹರಿಸಬೇಕು’ ಎಂದರು.

ಶಾಲೆಯಲ್ಲಿ ಒಂದೇ ಕಂಪ್ಯೂಟರ್: ‘ಶಾಲೆಯಲ್ಲಿ ಒಟ್ಟು 210 ವಿದ್ಯಾರ್ಥಿಗಳು, 7 ಶಿಕ್ಷಕರು ಇದ್ದಾರೆ. ಆದರೆ, ಕಂಪ್ಯೂಟರ್ ಮಾತ್ರ ಒಂದೇ ಇದೆ. ಗ್ರಾಮ ಪಂಚಾಯಿತಿಯಿಂದ ಕಂಪ್ಯೂಟರ್ ಕೊಡಲಾಗಿದೆ. ಆದರೆ, ಪ್ರೊಜೆಕ್ಟರ್ ಮತ್ತು ಸ್ಮಾರ್ಟ್‌ಕ್ಲಾಸ್ ರೂಮ್‌ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಆಗುತ್ತಿಲ್ಲ. ಅಗತ್ಯ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಕ್ಲಾಸ್‌ ರೂಮ್‌ ವ್ಯವಸ್ಥೆ ಕಲ್ಪಿಸಿದರೆ, ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಸರಳ ಹಾಗೂ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದು’ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಇಂದೂಬಾಯಿ ತಿಳಿಸಿದರು.

ನೀರಿನ ಸಮಸ್ಯೆ: ‘ಜಲ ನಿರ್ಮಲ ಯೋಜನೆ’ಯಡಿ ಶಾಲೆಯಲ್ಲಿ ಶುದ್ಧ ನೀರಿನ ಘಟಕ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಅದಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಶಾಲೆಯ ವಿದ್ಯಾರ್ಥಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

‘ಅಡುಗೆ ತಯಾರಿಸಲು ಹಾಗೂ ಮಕ್ಕಳಿಗೆ ಕುಡಿಯಲು ನಿತ್ಯ 1 ಕಿ.ಮೀ ದೂರದಿಂದ ನೀರು ಹೊತ್ತು ತರಬೇಕು. ನಾಲ್ವರು ಅಡುಗೆ ಸಿಬ್ಬಂದಿ ಪೈಕಿ ಒಬ್ಬರಿಗೆ ನೀರು ತರುವುದೇ ಕೆಲಸವಾಗುತ್ತೆ. ಹೀಗಿದ್ದರೂ ಕೆಲವೊಮ್ಮೆ ಮಕ್ಕಳಿಗೆ ಊಟ ಮಾಡಿದ ನಂತರ ಕುಡಿಯಲು ಮತ್ತು ತಟ್ಟೆ ತೊಳೆಯಲು ನೀರು ಇರುವುದಿಲ್ಲ. ಶಾಲೆಗೆ ನಳದ ಸಂಪರ್ಕ ಕಲ್ಪಿಸಬೇಕು, ಇಲ್ಲವೇಶಾಲಾವರಣದಲ್ಲಿ ಪ್ರತ್ಯೇಕ ಕೊಳವೆಬಾವಿ ಕೊರೆಸಬೇಕು’ ಎಂದು ಬಿಸಿಯೂಟ ತಯಾರಕರುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.