ADVERTISEMENT

ಕಲಬುರಗಿ: ಹದಗೆಟ್ಟ ರಸ್ತೆಯಲ್ಲಿ ಸಂಚಾರ ಹೈರಾಣ

ಬ್ರಹ್ಮಪುರದ ಮಾಣಿಕೇಶ್ವರಿ ದೇವಸ್ಥಾನದಿಂದ ಡಬರಾಬಾದಿ ಕ್ರಾಸ್‌ವರೆಗಿನ ರಸ್ತೆ

ಬಸವರಾಜ ದಳವಾಯಿ
Published 24 ಅಕ್ಟೋಬರ್ 2025, 6:55 IST
Last Updated 24 ಅಕ್ಟೋಬರ್ 2025, 6:55 IST
ಕಲಬುರಗಿಯ ಬ್ರಹ್ಮಪುರ ನಗರದ ಮಾಣಿಕೇಶ್ವರಿ ದೇವಸ್ಥಾನದ ಬಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ   ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಕಲಬುರಗಿಯ ಬ್ರಹ್ಮಪುರ ನಗರದ ಮಾಣಿಕೇಶ್ವರಿ ದೇವಸ್ಥಾನದ ಬಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ   ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್    

ಕಲಬುರಗಿ: ಇಲ್ಲಿಯ ಬ್ರಹ್ಮಪುರ ನಗರದ ಚೌಡೇಶ್ವರಿ ಕಾಲೊನಿಯ ಮಾಣಿಕೇಶ್ವರಿ ದೇವಸ್ಥಾನದಿಂದ ಡಬರಾಬಾದ್‌ ಕ್ರಾಸ್‌ವರೆಗಿನ ರಸ್ತೆ ತೀವ್ರ ಹದಗೆಟ್ಟಿದ್ದು, ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವಂತಾಗಿದೆ.

ಸುಮಾರು 2.5 ಕಿ.ಮೀ ದೂರದ ಈ ರಸ್ತೆಯಲ್ಲಿ ನಿತ್ಯ ನೂರಾರು ಜನ ಓಡಾಡುತ್ತಾರೆ. ಸಮರ್ಪಕ ನಿರ್ವಹಣೆಯ ಕೊರತೆ, ಹಲವು ವರ್ಷಗಳಿಂದ ಡಾಂಬರು ಕಾಣದಂತಿರುವ ಈ ರಸ್ತೆಯ ದುರವಸ್ಥೆಗೆ ವಾಹನ ಸವಾರರು ಜನಪ್ರತಿನಿಧಿಗಳ ವಿರುದ್ಧ ನಿತ್ಯ ಕಿಡಿಕಾರುತ್ತಾರೆ ಮತ್ತು ಅಸಹಾಯಕತೆಯನ್ನೂ ವ್ಯಕ್ತಪಡಿಸುತ್ತಾರೆ.

ಮೂರ್ನಾಲ್ಕು ವಾರ್ಡ್‌ಗಳ ವ್ಯಾಪ್ತಿಗೆ ಹಂಚಿಹೋಗಿರುವ ಈ ರಸ್ತೆಯಲ್ಲಿ ತಗ್ಗು ಗುಂಡಿಗಳೇ ಹೆಚ್ಚಾಗಿವೆ. ಗುಂಡಿಗಳ ತಪ್ಪಿಸಲು ಹೋಗಿ ಬೈಕ್‌ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಎದುರು ಬರುವ ವಾಹನಕ್ಕೆ ಸೈಡ್‌ ಕೊಡಲು ತಗ್ಗು– ಗುಂಡಿಗೆ ಇಳಿಯಲೇಬೇಕಾಗುತ್ತದೆ. ರಸ್ತೆಗೆ ಹೊಂದಿಕೊಂಡಂತೆ ಕೆಲವೊಂದು ಕಡೆ ಚರಂಡಿಗಳನ್ನು ತೆರೆದು ಮುಚ್ಚದೇ ಬಿಟ್ಟಿದ್ದು ಅಪರಿಚಿತರು ರಾತ್ರಿಯ ವೇಳೆ ತೆರಳುವಾಗ ಚರಂಡಿಗೆ ಬೀಳುವ ಅಪಾಯವೂ ಇಲ್ಲದಿಲ್ಲ.

ADVERTISEMENT

ಮಳೆ ಬಂದರಂತೂ ಈ ರಸ್ತೆಯ ಅಧ್ವಾನ ಮತ್ತಷ್ಟು ಹೆಚ್ಚುತ್ತದೆ. ರಾಡಿ ಹೆಚ್ಚಾಗಿ ಬೈಕ್ ಸವಾರರು ಜಾರಿ ಬೀಳುವುದು ಸಾಮಾನ್ಯ ಎಂಬಂತಿದೆ. ಒಳಚರಂಡಿಗಳನ್ನು ದುರಸ್ತಿ ಮಾಡಿ ಸರಿಯಾಗಿ ಮುಚ್ಚದ ಕಾರಣ ತಗ್ಗು–ದಿನ್ನೆ ನಿರ್ಮಾಣವಾಗಿವೆ.

‘ಈ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸವಾರರು ತೀವ್ರ ಪಡಿಪಾಟಲು ಅನುಭವಿಸಬೇಕಾಗಿದೆ. ನಗರ ಪ್ರದೇಶದಲ್ಲಿ ಈ ಪರಿ ರಸ್ತೆ ಹಾಳಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕೇಳದಂತಿರುವುದು ನಮ್ಮ ದುರ್ದೈವ’ ಎಂದು ಬೈಕ್ ಸವಾರ ಬಸವರಾಜಸ್ವಾಮಿ ನರೋಣಾ ಅಸಮಾಧಾನ ವ್ಯಕ್ತಪಡಿಸಿದರು.

‘ಈ ರಸ್ತೆಯನ್ನು ವಿಧಾನ ಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರು ಅನುದಾನ ತಂದು ದುರಸ್ತಿ ಮಾಡಿಸುವ ಚಿಂತನೆಯಲ್ಲಿದ್ದಾರೆ. ಈ ಭಾಗದಲ್ಲಿ ಅವರು ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ. ಆದರೆ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ರಸ್ತೆಯ ಕಡೆ ಕ್ಷೇತ್ರದ ಶಾಸಕರಾದ ಕನೀಜ್‌ ಫಾತಿಮಾ ಗಮನಹರಿಸಿಲ್ಲ. ಖಾದ್ರಿ ಚೌಕ ಸೇರಿದಂತೆ ಹಲವು ಕಡೆ ಅವರದೇ ಸಮುದಾಯದ ಜನರಿದ್ದರೂ ನಮ್ಮ ಮನವಿಗಳಿಗೆ ಸ್ಪಂದಿಸುವದಿಲ್ಲ’ ಎಂದು ಮಾಣಿಕೇಶ್ವರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಅರ್ಜುನ ಜಮಾದಾರ ಹೇಳಿದರು.

‘ಹತ್ತು ವರ್ಷದ ಹಿಂದೆ ಶಹಾಪುರದ ಗುತ್ತಿಗೆದಾರರೊಬ್ಬರು ಕಳಪೆ ಡಾಂಬರೀಕರಣ ಕಾಮಗಾರಿ ಮಾಡಿಸಿ ಬಿಲ್ ಎತ್ತಿಕೊಂಡು ಹೋಗಿದ್ದಾರೆ. ರಸ್ತೆ ದುರಸ್ತಿಯಾದರೆ ಮಾಣಿಕೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ’ ಎಂದರು.

‘ಈ ರಸ್ತೆ ಡಾಂಬರೀಕರಣ ಕಂಡು ಬಹಳ ವರ್ಷಗಳಾದವು. ರಸ್ತೆ ಶೀಘ್ರ ದುರಸ್ತಿ ಆಗಬೇಕು’ ಎಂದು ಬ್ರಹ್ಮಪುರ ನಿವಾಸಿ ಶಂಕರ ನಂದಿಹಳ್ಳಿ ಒತ್ತಾಯಿಸಿದರು.

ಕಲಬುರಗಿಯ ಬ್ರಹ್ಮಪುರ ನಗರದ ಮಾಣಿಕೇಶ್ವರಿ ದೇವಸ್ಥಾನದ ಬಳಿ ಚರಂಡಿ ಮುಚ್ಚದಿರುವುದು

ಅನುದಾನ ಕೊಟ್ಟಿಲ್ಲ: ಶಿವಾನಂದ ಪಿಸ್ತಿ

‘ರಸ್ತೆ ದುರಸ್ತಿ ಬಗ್ಗೆ ಎರಡು–ಮೂರು ಬಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಎರಡು ಮೂರು ದಿನಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. 2 ವರ್ಷದಿಂದ ಪಾಲಿಕೆಯ ಬಿಜೆಪಿ ಸದಸ್ಯರಿಗೆ ಅನುದಾನ ಕೊಟ್ಟಿಲ್ಲ. ಕಾಂಗ್ರೆಸ್‌ನವರಿಗೆ ಮಾತ್ರ ಕೊಡಲಾಗುತ್ತಿದೆ. ಅಲ್ಲದೇ ಈ ರಸ್ತೆಯು 25 26 27 38ನೇ ವಾರ್ಡ್‌ಗಳಲ್ಲಿ ಹಂಚಿಹೋಗಿದೆ. ನನ್ನ ವ್ಯಾಪ್ತಿಗೆ ಕೇವಲ 100 ಮೀ. ಮಾತ್ರ ಬರುತ್ತದೆ’ ಎಂದು ವಾರ್ಡ್‌ ನಂ.25ರ ಪಾಲಿಕೆ ಬಿಜೆಪಿ ಸದಸ್ಯ ಶಿವಾನಂದ ಪಿಸ್ತಿ ಹೇಳಿದರು.

ದುರಸ್ತಿಗೆ ಕ್ರಮ: ಅನುಪಮಾ ಕಮಕನೂರು ‘ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಸ್ತೆಯ ಸಂಪೂರ್ಣ ದುರಸ್ತಿಗಾಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿಗೂ ಪ್ರಸ್ತಾವ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಒಂದು ತಿಂಗಳೊಳಗೆ ರಸ್ತೆ ದುರಸ್ತಿಯಾಗಲಿದೆ. ತಾತ್ಕಾಲಿಕವಾಗಿ ಮುರುಂ ಹಾಕಿ ದುರಸ್ತಿ ಮಾಡಲು ಮೂರ್ನಾಲ್ಕು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆಯ ವಾರ್ಡ್‌ ನಂ.26ರ ಸದಸ್ಯೆ ಅನುಪಮಾ ರಮೇಶ ಕಮಕನೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.