ADVERTISEMENT

ಕೋಡ್ಲಿ: ಬನಶಂಕರಿದೇವಿ ಅದ್ದೂರಿ ರಥೋತ್ಸವ

ರಥೋತ್ಸವದಲ್ಲಿ ಶ್ರದ್ಧಾಭಕ್ತಿಯಿಂದ ಹರಕೆ ಸಲ್ಲಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:50 IST
Last Updated 5 ಜನವರಿ 2026, 5:50 IST
ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು
ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಕಾಳಗಿ: ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಬನದಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ಅದ್ದೂರಿಯಾಗಿ ಜರುಗಿತು.

ನೆರೆದಿದ್ದ ಅಪಾರ ಭಕ್ತರು ಹೂಹಾರ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ ತೇರಿನ ಮೇಲೆ ಫಲಪುಷ್ಪ ತೂರಿ ಜೈಕಾರ ಹಾಕಿ ಕೈ ಮುಗಿದು ನಮಿಸಿ ಧನ್ಯರಾದರು. ಇದಕ್ಕೂ ಮುಂಚೆ ದೇವಸ್ಥಾನಕ್ಕೆ ಐದು ಮನೆಗಳಿಂದ ತನಾರತಿ, ಕುಂಭ ಆಗಮನವಾಗಿ ರಾಮಲಿಂಗರೆಡ್ಡಿ ದೇಶಮುಖ ಮನೆಯಿಂದ ಭವ್ಯ ಮೆರವಣಿಗೆಯೊಂದಿಗೆ ಪಲ್ಲಕಿ ಸಹಿತ ಕಳಸ ತರಲಾಯಿತು.

ತದನಂತರದಲ್ಲಿ ಪುರವಂತರ ಕುಣಿತ, ರಥಕ್ಕೆ ಕುಂಭ-ಕಳಸದ ಪ್ರದಕ್ಷಿಣೆ, ಮಂಗಳಾರತಿ ಜರುಗಿ ಜಯಘೋಷ ಮೊಳಗಿತು. ಪಟಾಕಿಯ ಆಕರ್ಷಕ ನೋಟ, ವಾದ್ಯಮೇಳದ ಝೇಂಕಾರ ಕಳೆಕಟ್ಟಿ ಭಕ್ತರು ತೇರು ಎಳೆದು ಸಂಭ್ರಮಿಸಿದರು.

ADVERTISEMENT

ಸ್ಥಳೀಯ ಹಿರೇಮಠದ ಪೂಜ್ಯ ಬಸಲಿಂಗ ಶಿವಾಚಾರ್ಯರು, ಶಂಕ್ರಯ್ಯಸ್ವಾಮಿ ಯಲ್ಮಡಗಿ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು, ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು. ರಟಕಲ್ ಪಿಎಸ್ಐ ಶೀಲಾದೇವಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದರು.

ಭಾನುವಾರ (ಜ.4) ಸಂಜೆ 6.30ಕ್ಕೆ ಕಲಾವಿದ ರಾಚಯ್ಯಸ್ವಾಮಿ, ತುಕಾರಾಮ ನಾಗೂರೆ ಅವರಿಂದ ಹಾಸ್ಯ ಹಾಗೂ ಜಾದು ಕಾರ್ಯಕ್ರಮ. ಸೋಮವಾರ ಸಂಜೆ 6.30ಕ್ಕೆ ರೇವಣಸಿದ್ದಪ್ಪ ದುಕಾನದಾರ ಅವರಿಂದ ಹಾಸ್ಯ, ಸಾಸರಗಾಂವ ಶಾಲಾ ಮಕ್ಕಳಿಂದ ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಜರುಗಲಿದೆ.

ಮಂಗಳವಾರ ಸಂಜೆ 6.30ಕ್ಕೆ ಸಹಸ್ರ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ನಾಲವಾರ, ಹೊನ್ನಕಿರಣಗಿ, ಹಲಕರ್ಟಿ, ಬೆಳಗುಂಪಾ, ರಟಕಲ್ ಮಠಾಧೀಶರು ಒಳಗೊಂಡಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.