ADVERTISEMENT

‘ಭೂ ಸುಧಾರಣಾ ಕಾಯ್ದೆ ರೈತರಿಗೆ ಮರಣ ಶಾಸನ’

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:50 IST
Last Updated 29 ಸೆಪ್ಟೆಂಬರ್ 2020, 6:50 IST
ಚಿಂಚೋಳಿ ಪಟ್ಟಣದಲ್ಲಿ ಭೂಸುಧಾರಣಾ ಕಾಯ್ಕೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ವಕ್ತಾರ ಸುಭಾಷ ರಾಠೋಡ್ ಮಾತನಾಡಿದರು 
ಚಿಂಚೋಳಿ ಪಟ್ಟಣದಲ್ಲಿ ಭೂಸುಧಾರಣಾ ಕಾಯ್ಕೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ವಕ್ತಾರ ಸುಭಾಷ ರಾಠೋಡ್ ಮಾತನಾಡಿದರು    

ಚಿಂಚೋಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ನರೇಂದ್ರಸಿಂಗ್ ತೋಮರ ಅವರು ಕೃಷಿಕರಲ್ಲ. ಇವರಿಂದ ಕೃಷಿ ಕ್ಷೇತ್ರ ಸುಧಾರಣೆ ಕಾಣಲು ಹೇಗೆ ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್‌ನ ವಕ್ತಾರ ಸುಭಾಷ ರಾಠೋಡ್ ಸಫಮವಾರ ಇಲ್ಲಿ ಪ್ರಶ್ನಿಸಿದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಪ್ಪು ನೀತಿ ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನಾ ರ‍್ಯಾಲಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳ ಮೂಲಕ ಕೃಷಿ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದು ಖಂಡನೀಯ.ಭೂಸುಧಾರಣಾ ಕಾಯ್ದೆ ರೈತರಿಗೆ ಮರಣ ಶಾಸನವಾಗಲಿದೆ. ಇದರ ವಿರುದ್ಧ ದೇಶದಾದ್ಯಂತ ಜನಾಂದೋಲನ ನಡೆಯಲಿದೆ ಎಂದರು.

ADVERTISEMENT

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ ಮಾತನಾಡಿ, ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆಗಳು ರೈತ ವಿರೋಧಿಯಾಗಿವೆ. ಇದರಿಂದ ರೈತರು ಬೀದಿಗೆ ಬೀಳಲಿದ್ದಾರೆ. ಕಾಯ್ದೆಯಿಂದ ದೇಶದ ಶೇ70ರಷ್ಟು ಜನರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ ಎಂದರು.

ಸ್ವಾತಂತ್ರ್ಯಕ್ಕಿಂತ ಮೊದಲು ದೇಶದಲ್ಲಿ ಗುತ್ತಿಗೆ ಕೃಷಿ ಪದ್ಧತಿ ಜಾರಿಯಲ್ಲಿತ್ತು. ಈಗ ಮತ್ತೆ ಗುತ್ತಿಗೆ ಕೃಷಿ ಪದ್ಧತಿ ಜಾರಿ ಮಾಡುತ್ತಿರುವುದು ನೋಡಿದರೆ ದೇಶ ಹಿಂದಕ್ಕೆ ಸಾಗುತ್ತಿರುವ ಸಂಕೇತವಾಗಿದೆ ಎಂದರು.

ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲರಾವ್ ಕಟ್ಟಿಮನಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಮಾತನಾಡಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ವರ್ಷದಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಿಂಚೋಳಿ ಮತದಾರರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಈಗ ಅವರು ವಚನ ಭ್ರಷ್ಟರಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ, ರಮೇಶ ಸೀಳಿನ್, ಮಾರುತಿ ಗಂಜಗಿರಿ, ಕಾಶಿನಾಥ ಸಿಂಧೆ, ಓಮನರಾವ್ ಕೊರವಿ, ಸಿದ್ದಯ್ಯ ಸವಾಮಿ, ಕಪೂರ, ಸಿದ್ದಲಿಂಗಯ್ಯ ಯಂಪಳ್ಳಿ, ಜಾಫರಖಾನ ಮಿರಿಯಾಣ, ಭೀಮಶೆಟ್ಟಿ ಯಂಪಳ್ಳಿ, ಪ್ರದೀಪ ತಿರ್ಲಾಪುರ, ಮಲ್ಲಮ್ಮ ಕೋಡ್ಲಿ, ಹಣಮಮಥ ಪೂಜಾರಿ, ಮಾಜೀದ್ ಪಟೇಲ್, ಎಸ್.ಕೆ ಮುಕ್ತಾರ, ಮನೋಹರ ಕೊರವಿ, ಮಗದ್ದುಮಖಾನ್, ಜಗನ್ನಾಥ ಗುತ್ತೇದಾರ, ಮನೋಹರ ಕೊರವಿ, ಶೇಖ್ ಫರೀದ್, ವಿಜಯಕುಮಾರ ಗಂಗನಪಳ್ಳಿ, ನಾಗೇಶ ಗುಣಾಜಿ ಇದ್ದರು.

ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ಬಸ್ ಡಿಪೋ ಕ್ರಾಸ್‌ವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.