ADVERTISEMENT

ಹಿರೇಮಠರದ್ದು ಅಪ್ಪಟ ಜಾನಪದ ಬದುಕು: ಪ್ರೊ.ಶಿವರಾಜ ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:41 IST
Last Updated 24 ನವೆಂಬರ್ 2025, 6:41 IST
ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಪ್ರೊ.ಸೂಗಯ್ಯ ಹಿರೇಮಠ ಅವರ ಬದುಕು–ಬರಹ ಒಂದು ಚಿಂತನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಪ್ರೊ.ಸೂಗಯ್ಯ ಹಿರೇಮಠ ಅವರ ಬದುಕು–ಬರಹ ಒಂದು ಚಿಂತನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಕಲಬುರಗಿ: ‘ಬಂಡಾಯ ಸಾಹಿತಿ ಪ್ರೊ.ಸೂಗಯ್ಯ ಹಿರೇಮಠ ಅವರದ್ದು ಅಪ್ಪಟ ಜಾನಪದ ಬದುಕಾಗಿತ್ತು’ ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ ಹೇಳಿದರು.

ಸೂಗಯ್ಯ ಹಿರೇಮಠ ಸಾಹಿತ್ಯ–ಸಂಸ್ಕೃತಿ ಪ್ರತಿಷ್ಠಾನ, ಸರ್ವೋದಯ ಅಭಿವೃದ್ಧಿ ಸೇವಾ ಸಂಘದ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಪ್ರೊ.ಸೂಗಯ್ಯ ಹಿರೇಮಠ ಅವರ ‘ಬದುಕು–ಬರಹ ಒಂದು ಚಿಂತನ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

‘ತಮ್ಮ ಸಾಹಿತ್ಯದ ಮೂಲಕ ಅಳಿದ ನಂತರವೂ ಉಳಿದ ಸೂಗಯ್ಯನವರು ನೇರ ನಡೆ–ನುಡಿ ಉಳ್ಳವರಾಗಿದ್ದರು. ಸಗರ ನಾಡಿನ ಸುಗಂಧವನ್ನು ನಾಡಿನಾದ್ಯಂತ ಪಸರಿಸಿದ ಸರಳ–ಸಜ್ಜನಿಕೆಯ ವ್ಯಕ್ತಿಯಾಗಿದ್ದರು’ ಎಂದು ಅವರು ತಿಳಿಸಿದರು.

ADVERTISEMENT

ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಮಾತನಾಡಿ,‘ವೈಚಾರಿಕ, ವಸ್ತುನಿಷ್ಠ ಬರಹಗಾರರಾಗಿದ್ದ ಸೂಗಯ್ಯನವರು ತಮ್ಮ ಕಾವ್ಯ ಕೃತಿಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಅನಾವರಣಗೊಳಿಸಿದರು’ ಎಂದರು.

ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನದ ಅಧ್ಯಕ್ಷ ಗವಿಸಿದ್ದಪ್ಪ ಪಾಟೀಲ ಅವರು ಸೂಗಯ್ಯ ಹಿರೇಮಠ ಅವರ ಕೃತಿಗಳ ಅವಲೋಕನ ಮಾಡಿದರು.

ಸಾಮಾಜಿಕ ಚಿಂತನೆಗಳ ಕುರಿತು ಸಾಹಿತಿ ಚಿ.ಸಿ.ನಿಂಗಣ್ಣ, ‘ದೇಶಿಯ ಭಾಷೆ ಹಾಗೂ ಬಂಡಾಯದ ನಿಲುವುಗಳು’ ಕುರಿತು ಪತ್ರಕರ್ತ ಹಾಗೂ ಲೇಖಕ ಶಿವರಂಜನ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಪ್ರೊ.ಕೆ.ವೀರಪ್ಪ ಹಿರೇಮಠ ಅವರ ಒಡನಾಟ ಸ್ಮರಿಸಿದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಪ.ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ನಟರಾಜ ಸೂಗಯ್ಯ ಹಿರೇಮಠ ಹಾಗೂ ಉಪಾಧ್ಯಕ್ಷ ಗಿರಿಮಲ್ಲಪ್ಪ ಹರವಾಳ, ಪ್ರೊ.ಎಸ್.ಎಲ್.ಪಾಟೀಲ, ಕನಕಪ್ಪ ಬಿಲ್ಲವ, ಮಹೇಶ ಕುಲಕರ್ಣಿ, ಬಾಬು ಮಿಟೇಕರ್, ಮಂಜುನಾಥ ಪಾಟೀಲ ಸೇರಿ ಅನೇಕರು ಹಾಜರಿದ್ದರು.

ಚಿದಾನಂದ ಹಿರೇಮಠ ಸ್ವಾಗತಿಸಿದರು. ಶಂಕರಗೌಡ ಪಾಟೀಲ ನಿರೂಪಿಸಿದರು. ಕುಶಾಲ ಯಡವಳ್ಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.