ಕಲಬುರಗಿ: ‘ದಿವಂಗತ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಜೀವನಾಧಾರಿತ ‘ಬಂಡೆ ಸಾಹೇಬ್’ ಸಿನಿಮಾ ಮೇ 16ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಸಿನಿಮಾದ ನಿರ್ದೇಶಕ ಚಿನ್ಮಯ ರಾಮ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿನಿಮಾದ ಬಹುಪಾಲು ಚಿತ್ರೀಕರಣ ಕಲಬುರಗಿ ಜಿಲ್ಲೆಯಲ್ಲಿ ಆಗಿದೆ. ಇನ್ನುಳಿದ ಚಿತ್ರೀಕರಣ ಬೆಂಗಳೂರು ಮತ್ತು ಎರಡು ದಿನ ಶಿವಮೊಗ್ಗದಲ್ಲಿ ನಡೆದಿದೆ’ ಎಂದರು.
‘ಮಲ್ಲಿಕಾರ್ಜುನ ಬಂಡೆಯಾಗಿ ಸಂತೋಷ ರಾಮ್ ನಟಿಸಿದ್ದಾರೆ. ವೀರಣ್ಣ ಕೊರಳ್ಳಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಮಲಾ ಜಿ.ದೊಡ್ಮನಿ ಮತ್ತು ಮಾಲಾ ವಿ.ಕೊರಳ್ಳಿ ನಿರ್ಮಾಪಕರಾಗಿದ್ದಾರೆ. ಮುಂಜಾನೆ ಮಂಜು ಅವರ ಛಾಯಾಗ್ರಹಣ, ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಅಲೆಕ್ಸಾ ಹಿನ್ನೆಲೆ ಸಂಗೀತ ನೀಡಿದ್ದಾರೆ’ ಎಂದು ವಿವರಿಸಿದರು.
ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಗೋಪಣ್ಣ ದೊಡ್ಮನಿ ಮಾತನಾಡಿ, ‘₹ 1.5 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಲಾಗಿದೆ. 1 ಗಂಟೆ 55 ನಿಮಿಷದ ಚಿತ್ರ ಇದಾಗಿದ್ದು, 4 ಹಾಡುಗಳಿವೆ. ಮಲ್ಲಿಕಾರ್ಜುನ ಬಂಡೆ ಅವರ ಬಾಲ್ಯ, ವೃತ್ತಿ ಜೀವನದ ಕಥೆ ಸಿನಿಮಾದಲ್ಲಿದೆ’ ಎಂದು ಹೇಳಿದರು.
ವೀರಣ್ಣ ಕೊರಳ್ಳಿ ಮಾತನಾಡಿ, ‘ಮೇ 16ರಂದು ಕಲಬುರಗಿಯ ಶೆಟ್ಟಿ ಮತ್ತು ಸಂಗಮ್ ಸೇರಿದಂತೆ ರಾಜ್ಯದ 55 ಚಿತ್ರಮಂದಿರಗಳಲ್ಲಿ ‘ಬಂಡೆ ಸಾಹೇಬ್’ ಬಿಡುಗಡೆಯಾಗಲಿದೆ. ಅಂದು ಬೆಳಗಿನ ಜಾವ 5.30ಕ್ಕೆ ಸಂಗಮ್ ಚಿತ್ರಮಂದಿರದಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೂಜೆ ಸಲ್ಲಿಸಲಿದ್ದಾರೆ’ ಎಂದರು.
ನಟಿ ಕಾವ್ಯಾ ಭಾರದ್ವಾಜ್ ಮಾತನಾಡಿ, ‘ನಾನು ಬಂಡೆ ಅವರ ಪತ್ನಿ ಮಲ್ಲಮ್ಮ ಅವರ ಪಾತ್ರ ನಿರ್ವಹಿಸಿದ್ದೇನೆ. ಉತ್ತರ ಕರ್ನಾಟಕ ಭಾಗದ ಭಾಷೆ ಕಲಿತು ಅಭಿನಯಿಸಿದ್ದೇನೆ. ಎಲ್ಲರೂ ಚಿತ್ರ ನೋಡಿ ನಮ್ಮನ್ನು ಹರಸಿ’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.