ADVERTISEMENT

ವಾಡಿಯಲ್ಲಿ ಬಂಜಾರರ ಪ್ರತಿಭಟನೆ

ಕಲಬುರ್ಗಿಯಲ್ಲಿ ಸೇವಾಲಾಲ್ ಮೂರ್ತಿ ಧ್ವಂಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 19:45 IST
Last Updated 3 ಡಿಸೆಂಬರ್ 2019, 19:45 IST
ಕಲಬುರ್ಗಿ ವಿಮಾನ ನಿಲ್ದಾಣ ಸ್ಥಾಪನೆ ನೆಪದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜ ಹಾಗೂ ಮರಿಯಮ್ಮ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ವಾಡಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ಕಲಬುರ್ಗಿ ವಿಮಾನ ನಿಲ್ದಾಣ ಸ್ಥಾಪನೆ ನೆಪದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜ ಹಾಗೂ ಮರಿಯಮ್ಮ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ವಾಡಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು   

ವಾಡಿ: ಕಲಬುರ್ಗಿಯಲ್ಲಿ ಸೇವಾಲಾಲ್‌ ಮಹಾರಾಜ ಹಾಗೂ ಮರಿಯಮ್ಮ ದೇವಾಲಯ, ಮೂರ್ತಿಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಇಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಅಖಿಲ ಭಾರತ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಸುತ್ತಮುತ್ತಲಿನ ಬಂಜಾರ ಸಮುದಾಯದ ಜನರು ಭಾಗವಹಿಸಿದ್ದರು. ಉಪ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗೆ ಮನವಿ ಕಳುಹಿಸಿದರು.

ಗೊಬ್ಬುರ್‌ವಾಡಿಯ ಬಳಿರಾಂ ಮಹಾರಾಜರು ಮಾತನಾಡಿ, 'ಕಲಬುರ್ಗಿಯಲ್ಲಿ ನಡೆದ ಘಟನೆಯಿಂದ ಬಂಜಾರ ಸಮಾಜದವರಿಗೆ ನೋವಾಗಿದೆ. ಒಂದು ಸಮುದಾಯದ ಭಾವನೆಗಳ ಜೊತೆಗೆ ಚೆಲ್ಲಾಟ ಆಡುತ್ತಿರುವುದು ಸಮಂಜಸವಲ್ಲ. ತೆರವುಗೊಳಿಸಿದ ಸ್ಥಳದಲ್ಲಿ ಸೇವಾಲಾಲ್‌ ಮಹಾರಾಜ ಹಾಗೂ ಶ್ರೀ ಮರಿಯಮ್ಮ ದೇವಿ ದೇವಸ್ಥಾನವನ್ನು ಶೀಘ್ರ ಮರು ನಿರ್ಮಿಸಬೇಕು. ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್‌ ಮಹಾರಾಜರ ಹೆಸರು ಇಡಬೇಕು' ಎಂದು ಒತ್ತಾಯಿಸಿದರು.

ADVERTISEMENT

ಚೌಡಾಪುರ ಮುರಹರಿ ಮಹಾರಾಜರು ಮಾತನಾಡಿ, ‘ಈ ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಜಮೀನು ನೀಡಿದ ಲಂಬಾಣಿ ಜನರ ಮಕ್ಕಳಿಗೆ ನೌಕರಿ ನೀಡಬೇಕು’ ಎಂದು ಒತ್ತಾಯಿಸಿದರು.

ಮುಗುಳನಾಗವ ಜೇಮ್ ಸಿಂಗ್ ಮಹಾರಾಜ, ಕೇರಿ ತಾಂಡಾದ ಅನಿಲ್ ಸಾಹೇಬ್ ಮಹಾರಾಜ್ ಮಾತನಾಡಿದರು.
ಸಂಘಟನೆಯ ಸ್ಥಳೀಯ ಅಧ್ಯಕ್ಷ ಶಂಕರ ಜಾಧವ್ ಸಾವುಕಾರ, ವಿಠ್ಠಲ್ ನಾಯಕ್, ಸತೀಶ್ ವಾಲ್ಮೀಕಿ ನಾಯಕ್, ಬಾಬು ನಾಯಕ್, ವಿಕಾಸ್ ದಾವೂಜಿ ಚೌಹಾಣ್, ಆನಂದ್ ರಾಥೋಡ್, ಯುವರಾಜ್ ಲೋಕೇಶ್ ರಾಥೋಡ್, ಮನೀಶ್ ಚೌಹಾಣ್, ಚೌಹಾಣ್ ಬಾಳು ಚೌಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.