ADVERTISEMENT

ಬಸವ ಎಕ್ಸ್‌‍ಪ್ರೆಸ್ ರೈಲಿನ ಪ್ಲಾಟ್ ಫಾರಂ ಬದಲು, ಗೊಂದಲ ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಮೇ 2022, 18:20 IST
Last Updated 4 ಮೇ 2022, 18:20 IST
ಕೊನೆ ಕ್ಷಣದ ಬದಲಾವಣೆಯಿಂದ ರೈಲು ಹತ್ತುವ ಧಾವಂತದಲ್ಲಿ ಪ್ರಯಾಣಿಕರಿಗೆ ಗಾಯ
ಕೊನೆ ಕ್ಷಣದ ಬದಲಾವಣೆಯಿಂದ ರೈಲು ಹತ್ತುವ ಧಾವಂತದಲ್ಲಿ ಪ್ರಯಾಣಿಕರಿಗೆ ಗಾಯ   

ಕಲಬುರಗಿ: ಕೊನೆ ಕ್ಷಣದಲ್ಲಿ ಬಸವ ಎಕ್ಸ್‌ಪ್ರೆಸ್ ರೈಲಿನ ಪ್ಲಾಟ್‌ಫಾರಂ ಸಂಖ್ಯೆಯನ್ನು ಬುಧವಾರ ರಾತ್ರಿ ಏಕಾಏಕಿ ಬದಲಾಯಿಸಿದ್ದರಿಂದ ರೈಲನ್ನು ಧಾವಂತದಲ್ಲಿ ನಾಲ್ಕೈದು ಪ್ರಯಾಣಿಕರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ರೈಲ್ವೆ ಸಿಬ್ಬಂದಿಯ ಅಚಾತುರ್ಯಕ್ಕೆ ಆಕ್ರೋಶ ವ್ಯಕ್ತವಾಯಿತು. ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಹೊರಟಿತು.

ರಾತ್ರಿ 9.15ಕ್ಕೆ ಬಾಗಲಕೋಟೆಯಿಂದ ಮೈಸೂರಿಗೆ ತೆರಳುವ ರೈಲು ಕಲಬುರಗಿ ಪ್ಲಾಟ್‌ಫಾರಂಗೆ ಬರಬೇಕಿತ್ತು. ಹೀಗಾಗಿ, 9ಕ್ಕೆ ಪ್ಲಾಟ್‌ಫಾರಂ ಸಂಖ್ಯೆ 1ರಲ್ಲಿ ರೈಲು ಬರಲಿದೆ ಎಂದು ಧ್ವನಿವರ್ಧಕದಲ್ಲಿ ಘೋಷಿಸಲಾಯಿತು. ಆದರೆ, ಇನ್ನೇನು ರೈಲು ಬರಲಿದೆ ಎನ್ನುವಷ್ಟರಲ್ಲಿ ಪ್ಲಾಟ್ ಫಾರಂ ಸಂಖ್ಯೆ 1ರ ಬದಲಾಗಿ 2ರಲ್ಲಿ ಬರಲಿದೆ ಎಂದು ಘೋಷಿಸಲಾಯಿತು. ಕಲಬುರಗಿ ರೈಲು ನಿಲ್ದಾಣದಲ್ಲಿ ಕೆಲ ನಿಮಿಷವಷ್ಟೇ ನಿಲ್ಲುತ್ತದೆ. ಹೀಗಾಗಿ, ತಮ್ಮ ಬೋಗಿಗಳನ್ನು ಹುಡುಕಿಕೊಂಡು ಹೋಗುವ ಧಾವಂತದಲ್ಲಿ ಮೇಲ್ಸೇತುವೆ ಬಳಸಿ ಬರುವ ಬದಲು ಕೆಳಗಡೆಯಿಂದಲೇ ಈಚೆಯ ಪ್ಲಾಟ್‌ಫಾರಂಗೆ ಬರಲಾರಂಭಿಸಿದರು. ಘೋಷಣೆ ಹೊರಡಿಸಿದ ಕೆಲ ನಿಮಿಷಗಳಲ್ಲೇ ರೈಲು ಬಂತು. ಇದರಿಂದ ಗಾಬರಿಯಾದ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಅಲ್ಲಿಯೇ ಬಿಟ್ಟು ಓಟ ಕಿತ್ತರು. ಇದರಿಂದಾಗಿ ಕೆಲವರು ಗಾಯಗೊಂಡರು ಎಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಡಾ. ಅಖೀಬ್ ಜಾವೇದ್ ತಿಳಿಸಿದರು.

ರೈಲಿನ ಪ್ಲಾಟ್‌ಫಾರಂ ಬದಲಾಯಿಸಿದ್ದರಿಂದಲೇ ಈ ಅವಾಂತರ ಸೃಷ್ಟಿಯಾಗಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸ್ಟೇಶನ್ ಮ್ಯಾನೇಜರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಸ್ಟೇಶನ್ ಮ್ಯಾನೇಜರ್ ಅವರೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಅಷ್ಟರಲ್ಲಿ ರೈಲು ಹೊರಟಿತು. ಪ್ರಯಾಣಿಕರು ರೈಲಿನ ಚೈನ್ ಎಳೆದು ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸಲು ಪಟ್ಟು ಹಿಡಿದರು. ರೈಲ್ವೆ ವೈದ್ಯರು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ ಬಳಿಕ ರೈಲು ಹೊರಟಿತು ಎಂದು ಡಾ. ಜಾವೇದ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.