ಕಲಬುರಗಿ: ‘ಅಖಂಡ ಬಸವ ನಿಷ್ಠರಾಗಿದ್ದ ಡಾ.ಬಿ.ಡಿ.ಜತ್ತಿ ಅವರು ಮೌಲ್ವಿಗಳು ತಂದು ಕೊಟ್ಟ ಕುರ್‌ಆನ್ ಅನ್ನು ಶುಚಿರ್ಭೂತರಾಗಿ ಸ್ವೀಕರಿಸಿ ತಲೆ ಮೇಲಿಟ್ಟುಕೊಂಡು ಗೌರವಿಸಿದ್ದರು. ಅದು ಜತ್ತಿಯವರ ವ್ಯಕ್ತಿತ್ವ, ಬಸವತತ್ವ’ ಎಂದು ಬೆಂಗಳೂರಿನ ಕೇಂದ್ರ ಬಸವ ಸಮಿತಿ ಅಧ್ಯಕ್ಷ, ಡಾ.ಬಿ.ಡಿ.ಜತ್ತಿ ಅವರ ಪುತ್ರ ಅರವಿಂದ ಜತ್ತಿ ಹೇಳಿದರು.
ಬಸವ ಸಮಿತಿ ಕಲಬುರಗಿ ಹಾಗೂ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಿಂದ ನಗರದ ಅನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಹಾಗೂ ಡಾ.ಬಿ.ಡಿ.ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ‘ಡಾ.ಬಿ.ಡಿ.ಜತ್ತಿ ವ್ಯಕ್ತಿತ್ವ’ ಕುರಿತು ಮಾತನಾಡಿದರು.
‘ಡಾ.ಬಿ.ಡಿ.ಜತ್ತಿ ಅವರಿಗೆ ಎಲ್ಲ ಧರ್ಮಗಳ ಬಗೆಗೆ ಗೌರವವಿತ್ತು. ಒಂದು ದಿನ ಧೋತ್ರ ಉಟ್ಟು ಪೇಪರ್ ಓದುತ್ತ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಿದ್ದರು. 8–10 ಮಂದಿ ಮೌಲ್ವಿಗಳು ಕನ್ನಡದಲ್ಲಿ ಬರೆದ ಕುರ್‌ಆನ್ ಕೊಡಲು ಬಂದರು. ಆಗ ಜತ್ತಿ ಎದ್ದು ಸೀದಾ ಒಳಗೆ ಹೋದರು. ಕೈ–ಕಾಲು ಮುಖ ತೊಳೆದುಕೊಂಡು ಅಂಗಿ ಧರಿಸಿ, ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡು ವಿಭೂತಿ ಧರಿಸಿ ಬಂದರು. ಎರಡೂ ಕೈಯಲ್ಲಿ ಕುರ್‌ಆನ್ ತೆಗೆದುಕೊಂಡು ತಲೆಮೇಲಿಟ್ಟುಕೊಂಡರು’ ಎಂದು ನೆನಪಿಸಿಕೊಂಡರು.
‘ಕುರ್‌ಆನ್ ಮುಸ್ಲಿಮರದ್ದು, ಬೈಬಲ್ ಕ್ರೈಸ್ತರದ್ದು, ಭಗವದ್ಗೀತೆ ಬ್ರಾಹ್ಮಣರದ್ದು, ವಚನಗಳು ಲಿಂಗಾಯತರದ್ದು, ತ್ರಿಪಿಟಿಕೆಗಳು ಬುದ್ಧನದು ಎನ್ನುತ್ತ ಮಹಾನ್ ಲಿಂಗ ತತ್ವವನ್ನು ನಾವೆಲ್ಲ ಒಡೆದು–ಒಡೆದು ಛಿದ್ರ–ಛಿದ್ರ ಮಾಡಿದ್ದೇವೆ. ಮಹಾನ್ ಲಿಂಗದ ಅದ್ಭುತ ರೂಪ ಅರಿಯುವಲ್ಲಿ ನಾವೆಲ್ಲ ವಿಫಲರಾಗಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಒಮ್ಮೆ ಮುಂಬೈನಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಡಿ.ಜತ್ತಿ ಮುಂಬೈಗೆ ಹೋಗಿದ್ದರು. ಆಗ ಬಸವ ಜಯಂತಿಯ ಅಷ್ಟ ಶತಮಾನೋತ್ಸವ ಸಮೀಪಿಸಿತ್ತು. ಅದರ ಆಚರಣೆ ಕುರಿತು ಮುಂಬೈನ ಥಿಯೊಸಾಫಿಕಲ್ ಸೊಸೈಟಿಯಲ್ಲಿ ಚಿಂತನೆ ಶುರುವಾಗಿತ್ತು. ಸಣ್ಣ ಸಭೆ ನಡೆಸಿ 8ನೇ ಶತಮಾನೋತ್ಸವ ಆಚರಣೆಗೆ ಸಂಸ್ಥೆಯೊಂದನ್ನು ಕಟ್ಟಿ, ಅದಕ್ಕೆ ಜತ್ತಿ ಅವರನ್ನು ಅಧ್ಯಕ್ಷರಾಗಿಸಲು ತೀರ್ಮಾನಿಸಲಾಗಿತು. ಆಗ ಬಸವ ಸಮಿತಿ ಹುಟ್ಟಿತು. ಆರಂಭದಿಂದಲೂ ಈ ಸಮಿತಿಯನ್ನು ಬರೀ ಲಿಂಗಾಯತರು ಸೇರಿ ಕಟ್ಟಿದ್ದಲ್ಲ. ಅದು ಜಾತ್ಯತೀತವಾಗಿ ಬೆಳೆದು ಬಂದಿದೆ. ಅದಕ್ಕೆ ಈಗ 60 ವರ್ಷಗಳು ತುಂಬಿದೆ’ ಎಂದರು.
ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ ಅವರಿಗೆ ‘ಡಾ.ಬಿ.ಡಿ.ಜತ್ತಿ ಸಂಶೋಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವರುದ್ರಿ ಸ್ವಾಮೀಜಿ, ‘ಅಪ್ಪ ಬಸವಣ್ಣನವರ ಅನುಗ್ರಹದಂತೆ ಡಾ.ಬಿ.ಡಿ.ಜತ್ತಿ ಅವರ ಹೆಸರಿನ ಪ್ರಶಸ್ತಿ ತಂದು ಕೊಂಡುವಂತೆ ನನಗೆ ಹೇಳಿದ್ದಾರೆ. ಅದರಂತೆ ಈ ಪ್ರಶಸ್ತಿಯನ್ನು ಬಸವಣ್ಣವರ ಶ್ರೀಚರಣಕ್ಕೆ ಅರ್ಪಿಸುವೆ’ ಎಂದರು.
ಡಾ.ಬಿ.ಡಿ.ಜತ್ತಿ ಸಂಶೋಧನಾ ಕೇಂದ್ರದ ನಿರ್ದೇಶಕ ವೀರಣ್ಣ ದಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷರಾದ ವಿಲಾಸವತಿ ಖೂಬಾ ವೇದಿಕೆಯಲ್ಲಿದ್ದರು. ಕಲಬುರಗಿ ಬಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಾಲಿ ಸ್ವಾಗತಿಸಿದರು. ಆನಂದ ಸಿದ್ಧಾಮಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.