ADVERTISEMENT

5ರಿಂದ ಅದ್ಧೂರಿ ಬಸವ ಜಯಂತಿ ಆಚರಣೆ

ಉಪನ್ಯಾಸ, ವಚನ ಸಂಗೀತ ಈ ಬಾರಿಯ ವಿಶೇಷ

​ಪ್ರಜಾವಾಣಿ ವಾರ್ತೆ
Published 3 ಮೇ 2019, 12:13 IST
Last Updated 3 ಮೇ 2019, 12:13 IST

ಕಲಬುರ್ಗಿ: ‘ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವಣ್ಣನವರ 888ನೇ ಜಯಂತಿಯನ್ನು ಮೇ 5 ರಿಂದ7ರ ವರೆಗೆ ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಎಸ್‌.ಪಾಟೀಲ ಹೇಳಿದರು.

‘ಈ ಬಾರಿ ವಿಶೇಷ ಉಪನ್ಯಾಸ, ವಚನ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆ. ತುಮಕೂರು ಸಿದ್ಧಗಂಗಾ ಮಠದ ಸಿದ್ಧಗಂಗಾ ಸ್ವಾಮೀಜಿ ಸ್ಮರಣಾರ್ಥ ಬಸವ ವೇದಿಕೆಯನ್ನು ಶಿವಕುಮಾರ ಸ್ವಾಮೀಜಿ ವೇದಿಕೆ ಎಂದು ನಾಮಕರಣ ಮಾಡಲಾಗುವುದು. ಚಿತ್ತರಗಿ ಇಲಕಲ್‌ ಮಹಾಂತ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಮಹಾದ್ವಾರ ಹೆಸರು ಇಡಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೇ 5ರಿಂದ ಸತತ 3 ದಿನಗಳವರಗೆ ನಡೆಯುವ ಕಾರ್ಯಕ್ರಮದಲ್ಲಿಸೊಲ್ಲಾಪುರ ಸಂಗಮೇಶ್ವರ ಕಾಲೇಜು ಕನ್ನಡ ಪ್ರಾಧ್ಯಾಪಕ ಪ್ರೊ.ಬಾಬುರಾವ ಪೂಜಾರ ಅವರು ಉಪನ್ಯಾಸ ನೀಡುವರು. ಪ್ರಶಾಂತ ಅಣ್ಣಪ್ಪಾ ಗುಡ್ಡಾ ಅಧ್ಯಕ್ಷತೆ ವಹಿಸುವರು.ಮೇ 6 ರಂದು ಸಂಜೆ 6ಗಂಟೆಗೆ ಅನುಭಾವಗೋಷ್ಠಿ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮೇ 7ರಂದು ಬೆಳಿಗ್ಗೆ 10ರಿಂದ ಬಸವೇಶ್ವರ ಮೂರ್ತಿ ಹತ್ತಿರ ರಕ್ತದಾನ ಶಿಬಿರ, ಸಂಜೆ 5.30 ಗಂಟೆಗೆ ನಗರೇಶ್ವರ ಶಾಲೆಯಿಂದ ಅಲಂಕೃತ ವಾಹನದಲ್ಲಿ ಬಸವೇಶ್ವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮುರುಗೇಶ ಸಪ್ತಾಪುರ, ಡಾ.ಶಿವಶರಣ ಝಳಕಿ, ಪ್ರಕಾಶ ದೇಗಲಮಡಿ, ಲಕ್ಷ್ಮೀಕಾಂತ ಜೋಳದ, ಮಾಲಾ ಎಸ್‌.ಐ., ಡಾ. ರಾಜಶೇಖರ ಪಾಟೀಲ, ಡಾ. ಮಂಜುನಾಥ ದೊಶೆಟ್ಟಿ, ಡಾ. ಸಂತೋಷ ಪಾಟೀಲ ಹೆಬ್ಬಾಳ, ಮಹೇಶ ಆರ್., ಡಾ. ಶಿವಶರಣ ಝಳಕಿ ಅವರಿಗೆ ‘ಕಾಯಕ ಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಗುಡ್ಡಾ, ಕಾರ್ಯಾಧ್ಯಕ್ಷ ಕಲ್ಯಾಣರಾವ ಮೂಲಗೆ,ಉತ್ಸವ ಸಮಿತಿ ಕಾರ್ಯದರ್ಶಿ ಸಿದ್ದರಾಜು ಬಿರಾದಾರ, ಪಾಲಿಕೆ ಸದಸ್ಯ ಶರಣಕುಮಾರ ಮೋದಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಲಿ, ಶರಣು ಪಪ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.