ADVERTISEMENT

ಕಲಬುರಗಿ | ಅಕ್ಷಯ ತೃತಿಯಾ, ಗಟ್ಟಿ ಬಂಗಾರ ಬಿಕರಿ

ವಾರ ಮುಂಚಿನಿಂದಲೇ ಮುಂಗಡ ಬುಕಿಂಗ್‌, ಎರಡು ವರ್ಷಗಳ ನಂತರ ಸುಧಾರಿಸಿದ ವ್ಯಾಪಾರ

ಸಂತೋಷ ಈ.ಚಿನಗುಡಿ
Published 3 ಮೇ 2022, 4:49 IST
Last Updated 3 ಮೇ 2022, 4:49 IST

ಕಲಬುರಗಿ: ಅಕ್ಷಯ ತೃತಿಯ (ಮೇ 3) ಅಂಗವಾಗಿ ನಗರದ ಚಿನ್ನಾಭರಣ ಅಂಗಡಿಗಳಲ್ಲಿ ಭರದ ಸಿದ್ಧತೆ ನಡೆದಿವೆ. ಇಲ್ಲಿನ ಸರಾಫ್‌ ಬಜಾರ್‌ನಲ್ಲಿ ಸೋಮವಾರ ಕೂಡ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಮಂಗಳವಾರ ಚಿನ್ನ ಖರೀದಿಸಲು ನೂಗುನುಗ್ಗಲು ಉಂಟಾಗುವ ಸಾಧ್ಯತೆ ಇರುವ ಕಾರಣ ಹಲವರು ಮುನ್ನಾದಿನವೇ ‘ಬುಕ್‌’ ಮಾಡಿಕೊಂಡರು.

ಅಕ್ಷಯ ತೃತಿಯ ದಿನದಂದು ಚಿನ್ನ ಖರೀದಿಸಿದರೆ ಅದು ಅಕ್ಷಯವಾಗಿ ಉಳಿಯುತ್ತದೆ ಎನ್ನುವುದು ನಂಬಿಕೆ. ಹೀಗಾಗಿ, ಹಲವು ಗ್ರಾಹಕರು ವಾರದ ಮುಂಚೆಯೇ ಗಟ್ಟಿ ಬಂಗಾರ ಖರೀದಿಸಿ ಇಟ್ಟಿದ್ದು, ಮಂಗಳವಾರ ಮಳಿಗೆಗೆ ಹೋಗಿ ಮನೆಗೆ ತರಲಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ದಿನ ವೈವಿಧ್ಯಮಯ ಆಭರಣ ಕೊಳ್ಳುವವರು ಕಡಿಮೆ. ಬಹಳಷ್ಟು ಗ್ರಾಹಕರು ಸುತ್ತುಂಗುರಗಳನ್ನೇ ಖರೀದಿಸುತ್ತಾರೆ. ಗಟ್ಟಿ ಬಂಗಾರವನ್ನು ಮುಂದೆ ಯಾವ ಆಕಾರದಲ್ಲಾರದೂ ಬಳಸಿಕೊಳ್ಳಬಹುದು. ಆಭರಣ ಖರೀದಿಸಿದರೆ ಅದರ ಆಕಾರ ಬದಲಿಸುವುದು ಆಗುವುದಿಲ್ಲ ಎಂಬುದು ಇದರ ಹಿಂದಿನ ಉದ್ದೇಶ.

ADVERTISEMENT

ಮಾಲ್‌ಗಳೂ ಸೇರಿದಂತೆ ನಗರದಲ್ಲಿ ನೋಂದಾಯಿತ200 ಆಭರಣ ಮಳಿಗೆಗಳಿವೆ. ಅದರಲ್ಲೂ ಬಹು‍ಪಾಲು ಮಳಿಗೆಗಳು ಸರಾಫ್‌ ಬಜಾರ್‌,ಗೋಲ್ಡ್‌ ಹಬ್‌ ಹಾಗೂ ಸೂಪರ್‌ ಮಾರ್ಕೆಟ್‌ನ ಆಸುಪಾಸಿನಲ್ಲೇ ಇವೆ. ವರ್ತಕರೂ ಒಬ್ಬರಿಗಿಂತ ಒಬ್ಬರು ಮಳಿಗೆಗಳು ಸುಂದರವಾಗಿ ಸಿದ್ಧಗೊಳಿಸಿದ್ದಾರೆ.ವರ್ಣರಂಜಿತ ಬಣ್ಣದ ದೀಪಗಳ ವ್ಯವಸ್ಥೆ ಮಾಡಿದ್ದಾರೆ. ಗ್ರಾಹಕರ ಚಿತ್ತ ಸೆಳೆಯಲು ಒಪ್ಪ ಓರಣವಾಗಿ ಜೋಡಿಸಿದ್ದಾರೆ. ಮತ್ತೆ ಕೆಲವರು ತಂಪು ಪಾನೀಯ, ನೀರು, ಮಜ್ಜಿಗೆ, ಕೂಲರ್‌ ವ್ಯವಸ್ಥೆ ಮಾಡಿದ್ದಾರೆ. ದೊಡ್ಡ ಮಳಿಗೆಗಳ ಮಾಲೀಕರು ಚಿನ್ನಾಭರಣಗಳ ಮೇಲಿನ ತಯಾರಿಕಾ ಶುಲ್ಕ (ಮೇಕಿಂಗ್ ಚಾರ್ಜಸ್‌)ದಲ್ಲಿ ಶೇ 30ರ ವರೆಗೆ ಕಡಿತಗೊಳಿಸಿದ್ದಾರೆ. ಮತ್ತೆ ಕೆಲವರು ಬೆಳ್ಳಿಯ ನಾಣ್ಯ, ಲಕ್ಷ್ಮಿ ಮೂರ್ತಿ, ವ್ಯಾನಿಟಿ ಬ್ಯಾಗ್‌ ಹೀಗೆ ವಿವಿಧ ಉಡುಗೊರೆ ಇಟ್ಟಿದ್ದಾರೆ.

ಆಕರ್ಷಕ ವಿನ್ಯಾಸ: ಪುಟಾಣಿ ಮಕ್ಕಳು, ಮಹಿಳೆಯರು, ಪುರಷರ ಬೆರಳುಗಳ ಗಾತ್ರಕ್ಕೆ ಹೊಂದಿಕೊಳ್ಳುವಂಥ ಉಂಗುರಗಳನ್ನೂ ವ್ಯಾಪಾರಿಗಳು ತರಿಸಿದ್ದಾರೆ. ಸ್ವತಃ ಅಕ್ಕಸಾಲಿಗರ ಬಳಿ ಬೆರಳಿನ ಗಾತ್ರಕ್ಕೆ ತಕ್ಕಂತೆ ಸಿದ್ಧಪಡಿಸಿಕೊಂಡಿದ್ದು, ಅಕ್ಷಯ ತೃತಿಯ ದಿನ ಅವುಗಳನ್ನು ಬೆರಳೇರಿಸಿಕೊಳ್ಳಲಿದ್ದಾರೆ.ಮಾಲ್‌ ಹಾಗೂ ಮಳಿಗೆಗಳಲ್ಲಿ ಗಟ್ಟಿ ಬಂಗಾರದ ಉಂಗುರಗಳ ‘ರಾಶಿ’
ಹಾಕಿದ್ದಾರೆ.

‘ಕಳೆದ ಒಂದು ವಾರದಿಂದ ಸರಾಫ್‌ ಮಾರ್ಕೆಟ್‌ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಮಂಗಳವಾರ ಇನ್ನಷ್ಟು ಜನ ಬರುತ್ತಾರೆ. ಪ್ರತಿ ವರ್ಷವೂ ಇದು ಹೀಗೇ ನಡೆಯುವುದರಿಂದ ನಮಗೆ ರೂಢಿಯಾಗಿದೆ’ ಎನ್ನುವುದು ವರ್ತಕ ಷಫಿಯುದ್ದೀನ್‌ ಠಾಕೇದಾರ ಅವರ ಅನಿಸಿಕೆ.

ಎಲ್ಲೆಲ್ಲಿಂದ ಬರುತ್ತದೆ ಚಿನ್ನ: ನಗರಕ್ಕೆ ಮಹಾರಾಷ್ಟ್ರದ ಪುಣೆ, ಕೊಲ್ಲಾಪುರ ಹಾಗೂಚೆನ್ನೈ, ಕೊಯಮತ್ತೂರು, ಕೋಲ್ಕತ್ತದಿಂದ ಚಿನ್ನಾಭರಣಗಳು ಬರುತ್ತದೆ. ಆದರೆ, ಗಟ್ಟಿ ಬಂಗಾರ (ಉಂಗುರು)ವನ್ನು ಸ್ಥಳೀಯ ಅಕ್ಕಸಾಲಿಗರೇ ಹೆಚ್ಚು ಸಿದ್ಧಪಡಿಸುತ್ತಾರೆ. ಗ್ರಾಹಕರ ಹೆಸರಿನ ಒಂದು ಅಕ್ಷರ, ಮನೆದೇವರ ಮೂರ್ತಿ, ಕುಂಡಲಿಗೆ ತಕ್ಕಂಥ ರತ್ನದ ಹರಳುಗಳನ್ನು ಹಾಕಿಸಿ ಕೆಲವರು ಉಂಗುರ ಮಾಡಿಸಿಕೊಂಡಿದ್ದೂ ಇದೆ.

*

ಚಿನ್ನದ ಬೆಲೆ ಎಷ್ಟು?
ಕಲಬುರಗಿಯಲ್ಲಿ ಸೋಮವಾರ 24 ಕ್ಯಾರೆಟ್‌ 10 ಗ್ರಾಂ ಚಿನ್ನಕ್ಕೆ ₹53,200 ಮತ್ತು 22 ಕ್ಯಾರೆಟ್‌ 10 ಗ್ರಾಂ ಚಿನ್ನಕ್ಕೆ ₹48,800 ಇತ್ತು. ಮಂಗಳವಾರ ಇನ್ನೂ ₹ 150ರಿಂದ ₹ 200 ಹೆಚ್ಚುವ ಸಾಧ್ಯತೆ ಇದೆ.

ಮೇಲಾಗಿ 5 ಗ್ರಾಂ, 10 ಗ್ರಾಂನಷ್ಟು ಚಿನ್ನ ಖರೀದಿಸುವವರೇ ಹೆಚ್ಚು. ಆದ್ದರಿಂದ ಹೆಚ್ಚಿನ ಲಾಭ ನಿರೀಕ್ಷಿಸಲು ಆಗುವುದಿಲ್ಲ ಎನ್ನುತ್ತಾರೆ ವ್ಯಾಪಾರಿ ಲಕ್ಷ್ಮಿಕಾಂತ ಸಿತನೂರ.

ಚಿನ್ನ ಖರೀದಿಗೂ ಮುನ್ನ ಗಮನಿಸಿ
*ಕ್ಯಾರಟ್‌ ಮತ್ತು ಫೈನ್ಸೆಸ್‌ ಎನ್ನುವ ಎರಡು ರೀತಿಯಲ್ಲಿ ಚಿನ್ನದ ಶುದ್ಧತೆಯನ್ನು ಅಳೆಯಬಹುದು.

*24 ಕ್ಯಾರಟ್‌ನ ಶುದ್ಧ ಚಿನ್ನವು 24 ಚಿನ್ನ, 24 ಭಾಗ ಸತು ಹೊಂದಿರುತ್ತದೆ. 22 ಕ್ಯಾರಟ್‌ ಚಿನ್ನವು 22 ಭಾಗ ಬಂಗಾರ ಹಾಗೂ 2 ಭಾಗದಷ್ಟು ಬೆಳ್ಳಿ ಅಥವಾ ಇತರ ಸತುವನ್ನು ಮಿಶ್ರಣ ಇರುತ್ತದೆ.

*ಖರೀದಿಗೂ ಮುಂಚೆ ‘ಸ್ಕಿನ್‌ ಟೆಸ್ಟಿಂಗ್‌’ ಯಂತ್ರದಲ್ಲಿ ಪ್ಯೂರಿಟಿ ಪರೀಕ್ಷೆ ಮಾಡಿಸಬಹುದು.

*ಚಿನ್ನ ಖರೀದಿ ವೇಳೆ ‘ಹಾಲ್‌ಮಾರ್ಕ್’ ಚಿಹ್ನೆ ಗಮನಿಸಿವುದು ಕೂಡ ಮುಖ್ಯ.

*ವಿನ್ಯಾಸದ ಬಗ್ಗೆ ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌)ನಿಂದ ಪರೀಕ್ಷೆ ಮಾಡಿಸಿದ್ದಾರೆ ಎಂದು ಖಾತ್ರಿ ಮಾಡಿಕೊಳ್ಳಿ.

ಧರ್ಮದ ಗೊಂದಲ; ಕುಸಿದ ವ್ಯಾಪಾರ
‘ಕೆಲ ವ್ಯಕ್ತಿಗಳು ಹಿಂದೂ– ಮುಸ್ಲಿಂ ಧರ್ಮೀಯರ ಮಧ್ಯೆ ವ್ಯಾಪಾರದ ವಿರಸ ಹಬ್ಬಿಸಿದ್ದಾರೆ. ಇದರ ಕರಿನೆರಳು ಇಲ್ಲಿನ ಚಿನ್ನಾಭರಣ ವ್ಯಾಪಾರದ ಮೇಲೂ ಬಿದ್ದಿದೆ. ಪ್ರತಿ ವರ್ಷ ಎಷ್ಟು ವ್ಯಾ‍ಪಾರ ಆಗುತ್ತಿತ್ತೋ ಅದರ ಅರ್ಧದಷ್ಟು ಈ ಬಾರಿ ಆಗಿದೆ.

ಹಿಂದೂಗಳು ಹಿಂದೂಗಳ ಅಂಗಡಿಯಲ್ಲಿ, ಮುಸ್ಲೀಮರು ಮುಸ್ಲಿಮರ ಮಳಿಗೆಯಲ್ಲೇ ಚಿನ್ನ ಖರೀದಿಸುತ್ತಿದ್ದಾರೆ. ಮೇಲಾಗಿ, ಹಿಂದೂಗಳಲ್ಲಿ ಮತ್ತೆ ಕಲವರು ಜಾತಿ ನೋಡಿಕೊಂಡು ಹೋಗುತ್ತಿದ್ದಾರೆ. ಇದೆಲ್ಲದರ ಉಸಾಬರಿಯೇ ಬೇಡವೆಂದು ಮತ್ತಷ್ಟು ಜನ ಮಾಲ್‌ಗಳಿಗೆ ಹೋಗುತ್ತಿದ್ದಾರೆ.

ಇದರಿಂದ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ’ ಎನ್ನುವುದು ಸರಾಫ್‌ ಬಜಾರ್‌ನ ಕೆಲವ ವರ್ತಕರ ಗೋಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.