ADVERTISEMENT

ಮಕ್ಕಳ ವಿಚಾರಣೆ ಸಂವೇದನಾಶೀಲವಿರಲಿ: ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 3:04 IST
Last Updated 24 ಸೆಪ್ಟೆಂಬರ್ 2021, 3:04 IST
ಕಲಬುರ್ಗಿಯಲ್ಲಿ ಗುರುವಾರ ಪೊಲೀಸರಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ನ್ಯಾಯಾದೀಶ ಕೆ.ಸುಬ್ರಮಣ್ಯ ಉದ್ಘಾಟಿಸಿದರು. ಡಿಸಿಪಿ ಅಡೂರ ಶ್ರೀನಿವಾಸಲು, ಎಸ್ಪಿ ಡಾ.ಸಿಮಿ ಮರಿಯಮ್‌ ಜಾರ್ಜ್, ಕಮಿಷನರ್‌ ಡಾ.ವೈ.ಎಸ್. ರವಿಕುಮಾರ್‌, ನ್ಯಾಯಾಧೀಶ ಸುಶಾಂತ ಎಂ.ಚೌಗಲೆ ಇದ್ದರು
ಕಲಬುರ್ಗಿಯಲ್ಲಿ ಗುರುವಾರ ಪೊಲೀಸರಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ನ್ಯಾಯಾದೀಶ ಕೆ.ಸುಬ್ರಮಣ್ಯ ಉದ್ಘಾಟಿಸಿದರು. ಡಿಸಿಪಿ ಅಡೂರ ಶ್ರೀನಿವಾಸಲು, ಎಸ್ಪಿ ಡಾ.ಸಿಮಿ ಮರಿಯಮ್‌ ಜಾರ್ಜ್, ಕಮಿಷನರ್‌ ಡಾ.ವೈ.ಎಸ್. ರವಿಕುಮಾರ್‌, ನ್ಯಾಯಾಧೀಶ ಸುಶಾಂತ ಎಂ.ಚೌಗಲೆ ಇದ್ದರು   

ಕಲಬುರ್ಗಿ: ‘ಮಕ್ಕಳನ್ನು ತನಿಖೆಗೆ ಒಳಪಡಿಸುವಾಗ ತನಿಖಾಧಿಕಾರಿಗಳು ಸಂವೇದ ನಾಶೀಲರಾಗಿ ನಡೆದು ಕೊಳ್ಳಬೇಕು. ಪೊಲೀಸರನ್ನು ನೋಡಿದ ತಕ್ಷಣ ಅವರಲ್ಲಿ ಭಯ ಹುಟ್ಟುವಂತಾಗಬಾರದು. ಬದಲಾಗಿ ಭರವಸೆ ಬರಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕೆ.ಸುಬ್ರಮಣ್ಯ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಮಕ್ಕಳ ಸಂರಕ್ಷಣೆಯಲ್ಲಿ ವಿಶೇಷ ಪೊಲೀಸ್ ಘಟಕದ ಪಾತ್ರ ಮತ್ತು ಕಾಯ್ದೆಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರವು ಮಕ್ಕಳಿಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐ.ಸಿ.ಪಿ.ಎಸ್) ಅನ್ನು ಜಾರಿಗೆ ತಂದಿದೆ. ಈ ಯೋಜನೆ ಅನ್ವಯ ಮಕ್ಕಳನ್ನು ಶೋಷಣೆಗೆ ಒಳಪಡಿಸುತ್ತಿರುವ ಪದ್ಧತಿಗಳಾದ ಬಾಲ ಭಿಕ್ಷಾಟನೆ, ಬಾಲ್ಯ ವಿವಾಹ, ಬಾಲಕಾರ್ಮಿಕ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಲಿಂಗಭೇದ ಪದ್ಧತಿಗಳನ್ನು ನಿರ್ಮೂಲನೆ ಮಾಡಲು, ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಪಾಲಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್‌ ಮಾತನಾಡಿ, ‘ಮಕ್ಕಳು ತಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳನ್ನು ತಮ್ಮ ಜೀವನ ಪರ್ಯಂತ ಮರೆಯುವುದಿಲ್ಲ. ಅಂಥ ಘಟನೆಗಳಲ್ಲಿ ಪೊಲೀಸ್ ಅಧಿಕಾರಿಗಳೊಂದಿಗಿನ ಸಂವಾದವೂ ಸೇರಿದೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಮಕ್ಕಳ ಮಾನಸಿಕ ಸಾಮರ್ಥ್ಯಕ್ಕೆ ಘಾಸಿ ಆಗದಂತೆ ನಡೆದುಕೊಳ್ಳಬೇಕು’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಎಂ.ಚೌಗಲೆ ಮಾತನಾಡಿ, ‘ಮಕ್ಕಳಿಗಾಗಿ ವಿಶೇಷ ಪೊಲೀಸ್ ಘಟಕದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಘಟಕದ ನೋಡಲ್ ಅಧಿಕಾರಿಯಾಗಿದ್ದು, ಇವರ ಅಡಿಯಲ್ಲಿ ಒಬ್ಬ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿಯಾಗಿ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ನೇಮಿಸಲಾಗಿ ರುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಮಕ್ಕಳಿಗಾಗುವ ಅನ್ಯಾಯಗಳನ್ನು ತಡೆಗಟ್ಟಲು ಹಾಗೂ ಕ್ರಮ ವಹಿಸಲು ವಿಶೇಷ ಮಕ್ಕಳ ಪೊಲೀಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಾಗಿ ಪಿಎಸ್ಐ ಕಾರ್ಯನಿರ್ವಹಿಸುತ್ತಾರೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್‌,ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಮಾತನಾಡಿದರು. ಡಿಸಿಪಿ ಅಡೂರ ಶ್ರೀನಿವಾಸಲು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಹಾಯಕ ಪೊಲೀಸ್ ಆಯುಕ್ತ ಅನೀಶ್ ಕುಮಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಯಲ್ಲಾಲಿಂಗ ಕಾಳನೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ವೃತ್ತ ನಿರೀಕ್ಷಕರು, ಸಬ್ ಇನ್‌ಸ್ಪೆಕ್ಟರ್‌ಗಳು, ಹೆಡ್ ಕಾನ್‌ಸ್ಟೆಬಲ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.