
ಕಲಬುರಗಿ: ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಬಿ.ಇಡಿ ಎರಡು ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಗುಲಬರ್ಗಾ ವಿಶ್ವವಿದ್ಯಾಲಯ ಇನ್ನೂ ಪ್ರಕಟಿಸಿಲ್ಲ. ಇದರಿಂದಾಗಿ ಟಿಇಟಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ 2800ಕ್ಕೂ ಅಧಿಕ ಆಕಾಂಕ್ಷಿಗಳ ಭವಿಷ್ಯ ಅತಂತ್ರವಾಗಿದೆ.
ಪರೀಕ್ಷೆ ಬರೆದ 45 ದಿನಗಳಲ್ಲಿ ಫಲಿತಾಂಶ ಪ್ರಕಟವಾಗಬೇಕು. ಆದರೆ, ಬಿ.ಇಡಿ ಉತ್ತರ ಪತ್ರಿಕೆಯ ಮೌಲ್ಯಮಾಪನದ ವೇಳೆ ಕೆಲವರಿಗೆ ಹೆಚ್ಚಿನ ಅಂಕ ನೀಡಲಾಗಿದೆ ಹಾಗೂ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಪ್ರಯುಕ್ತ ನಡೆಯುತ್ತಿರುವ ತನಿಖೆ ಇನ್ನೂ ಮುಗಿಯದ ಕಾರಣ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಿದೆ ಎನ್ನಲಾಗುತ್ತಿದೆ. ಬಿ.ಇಡಿ ಪರೀಕ್ಷಾ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ ವಿಶ್ವವಿದ್ಯಾಲಯವು ಶಿಕ್ಷಣ ನಿಕಾಯದ ಡೀನ್ ಪ್ರೊ.ಹೂವಿನಭಾವಿ ಬಾಬಣ್ಣ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿಯನ್ನು ರಚಿಸಿದ್ದರು. ಬಾಬಣ್ಣ ಅವರು ತನಿಖೆ ನಡೆಸಿ ವರದಿಯನ್ನು ಸಿಂಡಿಕೇಟ್‌ಗೆ ಸಲ್ಲಿಸಿದ್ದರು. ಮುಂದಿನ ಕ್ರಮಕ್ಕಾಗಿ ವಿಶ್ವವಿದ್ಯಾಲಯವು ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮಾರ್ಗದರ್ಶನ ಕೋರಿ ಪತ್ರ ಬರೆದಿತ್ತು.
ಗೆಹಲೋತ್ ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ನೇತೃತ್ವದಲ್ಲಿ ಏಕವ್ಯಕ್ತಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದಾರೆ. ನ್ಯಾಯಮೂರ್ತಿ ಅವರು ಈಗಾಗಲೇ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ಅಂತಿಮ ವರದಿಯನ್ನು ಕುಲಾಧಿಪತಿಗೆ ಇನ್ನಷ್ಟೇ ಸಲ್ಲಿಸಬೇಕಿದೆ.
ತನಿಖೆ ಮುಗಿಯುವವರೆಗೂ ಫಲಿತಾಂಶ ಪ್ರಕಟವಾಗದೇ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಶೀಘ್ರ ಫಲಿತಾಂಶ ಪ್ರಕಟಣೆಗೆ ಒತ್ತಾಯಿಸಿ ಬಿ.ಇಡಿ ಪರೀಕ್ಷೆ ಬರೆದ ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳು ಇತ್ತೀಚೆಗೆ ವಿ.ವಿ. ಎದುರು ಪ್ರತಿಭಟನೆಯನ್ನೂ ನಡೆಸಿದ್ದರು. ಮತ್ತೆ ಇದೇ 30ರಂದು ಕಲಬುರಗಿಯ ಸರ್ದಾರ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎನ್ನುತ್ತಾರೆ ಬಿ.ಇಡಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಸಂಚಾಲಕ ತೇಜಸ್ ಆರ್. ಇಬ್ರಾಹಿಂಪುರ.
ಈ ಕುರಿತು ಪ್ರತಿಕ್ರಿಯೆ ನೀಡಿದ ಗುಲಬರ್ಗಾ ವಿ.ವಿ. ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ‘ಬಿ.ಇಡಿ ಅಕ್ರಮದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫಲಿತಾಂಶ ಪ್ರಕಟಿಸಲು ಸಭೆಯಲ್ಲಿ ತೀರ್ಮಾನವಾಗಿತ್ತು. ಕುಲಾಧಿಪತಿಗಳು ಮಧ್ಯಪ್ರವೇಶಿಸಿ ಫಲಿತಾಂಶ ಶೀಘ್ರ ಪ್ರಕಟಣೆಗೆ ಕ್ರಮ ಕೈಗೊಳ್ಳಬೇಕು. ವರ್ಷಗಟ್ಟಲೇ ಫಲಿತಾಂಶ ಬಾಕಿ ಇರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಏಟು ಬೀಳುತ್ತದೆ’ ಎಂದರು.
ರಾಜ್ಯಪಾಲರು ಬಿ.ಇಡಿ ಅಕ್ರಮದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಈಗ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವರದಿ ಸಲ್ಲಿಸಿದ ಬಳಿಕವೇ ಫಲಿತಾಂಶ ಪ್ರಕಟಣೆ ಬಗ್ಗೆ ತೀರ್ಮಾನಿಸಲಾಗುವುದುಪ್ರೊ.ಎನ್.ಜಿ.ಕಣ್ಣೂರ ಕುಲಸಚಿವ (ಮೌಲ್ಯಮಾಪನ) ಗುಲಬರ್ಗಾ ವಿ.ವಿ.
ಹತ್ತು ತಿಂಗಳಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತಾಗಿದೆ. ಫಲಿತಾಂಶ ಪ್ರಕಟವಾಗದ್ದರಿಂದ ಟಿಇಟಿ ಬರೆಯಲಾಗುತ್ತಿಲ್ಲ. ಮುಂದಿನ ಟಿಇಟಿ ನಡೆಸುವಾಗ ಎಷ್ಟೋ ಜನರ ವಯೋಮಿತಿ ಮೀರಿರುತ್ತದೆಮಂಜುಳಾ ಎನ್.ಜಿ. ಬಿ.ಇಡಿ ವಿದ್ಯಾರ್ಥಿನಿ
ಟಿಇಟಿ ಅರ್ಜಿ ಸಲ್ಲಿಕೆ ಆರಂಭ
ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ನವೆಂಬರ್ 7ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ. 9ರಂದು ಹಣ ಪಾವತಿ ಮಾಡಲು ಕೊನೆಯ ದಿನ. ಅಷ್ಟರೊಳಗೆ ಬಿ.ಇಡಿ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬೇಕಿದೆ. ಟಿಇಟಿಗೆ ಅರ್ಜಿ ಸಲ್ಲಿಸುವಾಗ ಅಂಕಪಟ್ಟಿಯನ್ನು ಕೇಳುವುದರಿಂದ ಕಳೆದ ಡಿಸೆಂಬರ್‌ನಲ್ಲಿ ಪರೀಕ್ಷೆ ಬರೆದವರಿಗೆ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ ಎಂದು ಬಿ.ಇಡಿ. ವಿದ್ಯಾರ್ಥಿಗಳ ಹೋರಾಟ ಸಮಿತಿ ಸಂಚಾಲಕ ತೇಜಸ್ ಇಬ್ರಾಹಿಂಪುರ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.