ADVERTISEMENT

ಪ್ರವಾಹ ಸಂತ್ರಸ್ತರ ಅರಣ್ಯರೋದನ; ಬೆನಕನಳ್ಳಿ ಜನರ ನಿದ್ದೆ ಗೆಡಿಸುತ್ತಿರುವ ಮಳೆರಾಯ

ಜಗನ್ನಾಥ ಡಿ.ಶೇರಿಕಾರ
Published 5 ನವೆಂಬರ್ 2025, 6:59 IST
Last Updated 5 ನವೆಂಬರ್ 2025, 6:59 IST
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು 
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು    

ಚಿಂಚೋಳಿ: ಬಿದ್ದ ಕನಸು ಮತ್ತೆ ಮತ್ತೆ ಬೀಳುವುದಿಲ್ಲ ಎಂಬುದು ಹಿರಿಯರ ನಂಬಿಕೆ. ಆದರೆ ತಾಲ್ಲೂಕಿನ ಬೆನಕನಳ್ಳಿ ಗ್ರಾಮಸ್ಥರಿಗೆ ಮಳೆರಾಯ ಪ್ರವಾಹದ ರೂಪದಲ್ಲಿ ಬೇತಾಳನಂತೆ ಕಾಡುತ್ತಿದ್ದಾನೆ. ಹೀಗಾಗಿ ಇವರಿಗೆ ಬಿದ್ದ ಕನಸು ಪದೇ ಪದೇ ಮರುಕಳಿಸಿ ದಂತಾಗುತ್ತಿದೆ.

ಪ್ರತಿವರ್ಷ ಮಳೆಗಾದಲ್ಲಿ ಜನರು 2–3 ತಿಂಗಳು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆದರೆ ಪ್ರಸಕ್ತ ವರ್ಷ ಪ್ರವಾಹದ ಸಮಸ್ಯೆ ಹೆಚ್ಚಾಗಿದೆ. ನ.4ರಂದು ಮಧ್ಯಾಹ್ನ ಭಾರಿ ಮಳೆ ಸುರಿದಿದ್ದರಿಂದ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದಲ್ಲದೇ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು ಗೋಚರಿಸಿತು.

ಹವಾಮಾನ ಇಲಾಖೆಯ ಭಾರಿ ಮಳೆಯ ಮುನ್ಸೂಚನೆ ನೀಡಿದರೆ ಸಾಕು, ಗ್ರಾಮದ ಹೊಸ ಬಡಾವಣೆಯ ಹತ್ತಾರು ಮನೆಗಳು ಹಾಗೂ ಹಳೆ ಊರಿನ ಕೆಲ ಮನೆಯವರು ರಾತ್ರಿ ನಿದ್ದೆಯೇ ಮಾಡುವುದಿಲ್ಲ.!

ADVERTISEMENT

‘ಮಳೆಗಾಲದಲ್ಲಿ ನಾವು ಮಲಗುವುದು ಬಿಡಿ, ಖುರ್ಚಿಯ ಮೇಲೆಯೇ ರಾತ್ರಿ ಕಳೆಯುವುದು ಅನಿವಾರ್ಯವಾಗಿದೆ. ಕಳೆದ ವರ್ಷ ನಮ್ಮ ಮಗ ಮನೆಯ ಹೊರಗಡೆ ನಿಲ್ಲಿಸಿದ ಬೈಕ್ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಈಗ ಜಾನುವಾರುಗಳಿಗೆ ಕಟ್ಟಿಹಾಕುವಂತೆ ಬೈಕ್ ವಿದ್ಯುತ್ ಕಂಬಕ್ಕೆ ಹಗ್ಗದಿಂದ ಕಟ್ಟುವ ಸ್ಥಿತಿಯಿದೆ’ ಎಂದು ಗ್ರಾಮದ ಗೃಹಿಣಿ ಪಾರ್ವತಿ ಸೂರ್ಯಕಾಂತ ಸಾಲಹಳ್ಳಿ ಅವರು ‘ಪ್ರಜಾವಾಣಿ’ ಎದುರು ಅಲವತ್ತುಕೊಂಡರು.

ಕೆರೋಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನಕನಳ್ಳಿ ಗ್ರಾಮಸ್ಥರು ಮಳೆಗಾಲದಲ್ಲಿ ಪ್ರವಾಹ ಪೀಡಿತರಾಗಿದ್ದು, ಒಂದುಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ.

ಭಂಟನಳ್ಳಿ, ಕೆರೋಳ್ಳಿ ಗ್ರಾಮದ ನೀರು ಹರಿದು ಬಂದು ಬೆನಕನಳ್ಳಿ ಗ್ರಾಮ ಸೇರುತ್ತಿದೆ. ಇದರಿಂದ ಇಲ್ಲಿನ ಜನರು ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆಗೆ ಸಿಲುಕುತ್ತಿದ್ದಾರೆ. ಮನೆಗಳಲ್ಲಿ ನೀರು ನುಗ್ಗಿದ ಕೂಡಲೆ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಸಮೀಕ್ಷೆ ನಡೆಸಿ ವರದಿ ನೀಡುತ್ತಾರೆ.

ಒಂದು ವರ್ಷದಲ್ಲಿ ಒಂದು ಮನೆಯಲ್ಲಿ ಒಮ್ಮೆ ಮಾತ್ರ ನೀರು ಹೊಕ್ಕರೆ ಪರಿಹಾರ ಕೊಡಲು ಅವಕಾಶವಿದೆ. ಪದೇ ಪದೇ ನೀರು ನುಗ್ಗಿದರೆ ಪರಿಹಾರ ನೀಡಲು ಬರುವುದಿಲ್ಲ. ಇದರಿಂದ ಜನರು ನೆಮ್ಮದಿಯಿಲ್ಲದೇ ಬದುಕು ಸವೆಸಿದರೆ, ಇನ್ನೊಂದೆಡೆ ಸಾಮಾನು ಸರಂಜಾಮು ಮತ್ತು ದವಸ ಧಾನ್ಯಗಳು ನೀರು ಪಾಲಾಗುತ್ತಿವೆ. ಹೀಗಾಗಿ ಇಲ್ಲಿನ ಜನರ ಗೋಳು ಅರಣ್ಯರೋದನವಾಗಿದೆ.
ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಗೋಳು ಹೇಳತೀರದಾಗಿದೆ. ಗ್ರಾಮದಲ್ಲಿ ಉಂಟಾಗುತ್ತಿರುವ ಪ್ರವಾಹದ ಸಮಸ್ಯೆಗೆ ಶಾಸ್ವತ ಪರಿಹಾರ ಮರಿಚೀಕೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

‘ಈ ಹಿಂದೆ ಗ್ರಾಮದ ಪ್ರವೇಶದಲ್ಲಿ ಸಿಡಿಯೊಂದು ಇತ್ತು. ಅದನ್ನು ಕೆಲವು ವರ್ಷಗಳ ಹಿಂದೆ ನೆಲಸಮಗೊಳಿಸಿದ್ದರಿಂದ ಗ್ರಾಮದೊಳಗೆ ಹೋಗಬೇಕಾದರೆ ಪ್ರವಾಹದ ನೀರಿನೊಳಗಡೆಯೇ ಹೆಜ್ಜೆಹಾಕಬೇಕು. ಸಿಡಿ ಒಡೆದುಹಾಕಿದ ನಂತರ ಅದರ ಕಡೆ ಯಾರು ತಿರುಗಿ ನೋಡಿಲ್ಲ’ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

‘ಗ್ರಾಮಕ್ಕೆ ನಾನು ಭೇಟಿ ನೀಡಿ ಪರಿಶೀಲಿಸಿ ಅಗತ್ಯವಾದ ಕಡೆ ಚರಂಡಿ ನಿರ್ಮಿಸಲು ಸ್ಥಳ ತೋರಿಸಿದ್ದೇನೆ. ಮಳೆ ಹೆಚ್ಚಾಗಿದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ತೊಂದರೆಯಾದ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು 
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು 
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು 
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದ ಹೊಸ ಬಡಾವಣೆಯಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿದ್ದರಿಂದ ಅಜ್ಜಿಯೊಬ್ಬರು ಖುರ್ಚಿಯ ಮೇಲೆ ಕುಳಿತಿರುವುದು
ನಮ್ಮ ಊರಿನ ಜನರ ಗೋಳು ಕೇಳುವವರೇ ಇಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಅವರು ಕಣ್ಣೊರೆಸುವುದು ಬಿಟ್ಟು ಸಮಸ್ಯೆಗೆ ಶಾಸ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು
ಮಲ್ಲು ರಾಯಪ್ಪಗೌಡ ಸ್ಥಳೀಯ ಯುವ ಮುಖಂಡ
ನಮಗೆ ಬಂದ ಕಷ್ಟ ಯಾರಿಗೂ ಬರಬಾರದು. ನಮ್ಮ ಮನೆಗಳಿಗೆ ನೀರು ನುಗ್ಗದಂತೆ ಮಾಡಿದರೆ ಸಾಕು. ಇಲ್ಲವಾದರೆ ಮಳೆಗಾಲ ಮುಗಿಯುವವರೆಗೆ ನಮಗೆ ಬೇರೆ ಕಡೆ ಸ್ಥಳಾಂತರಿಸಿ
ಪಾರ್ವತಿ ಸೂರ್ಯಕಾಂತ ಸಾಲಳ್ಳಿ ಗ್ರಾಮಸ್ಥೆ ಬೆನಕನಳ್ಳಿ
ಬಂಟನಳ್ಳಿ ಬೆನಕಳ್ಳಿ ಸೀಮೆಯಿಂದ ಬರುವ ನೀರು ಹರಿಯುವ ನಾಲಾದ ಒತ್ತುವರಿ ತೆರವುಗೊಳಿಸಿ ನೀರು ಬೇರೆ ಕಡೆಗೆ ತಿರುಗಿಸಲು ಕೋರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದೇವೆ. ಸಚಿವ ಡಾ. ಶರಣಪ್ರಕಾಶ ಪಾಟೀಲ ₹25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದಾರೆ
ಶರಣಕುಮಾರ ದೇಸಾಯಿ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.