ಚಿಂಚೋಳಿ: ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಬ್ಯಾರೇಜ್‌ಗಳಿಗೆ ಗೇಟುಗಳು ಅಳವಡಿಸದೇ ಭಣಗುಡುತ್ತಿದೆ. ಪ್ರತಿವರ್ಷ ಗೇಟುಗಳ ತೂಕ ಆಧರಿಸಿ ಗೇಟು ಅಳವಡಿಸಲು ಹಾಗೂ ತೆಗೆಯಲು ಅನುದಾನ ನೀಡುತ್ತಿತ್ತು.
ಇದನ್ನು ಟೆಂಡರ್ ಕರೆದು ಗುತ್ತಿಗೆ ಹೊಣೆ ಹೊತ್ತ ಎಜೆನ್ಸಿಯವರು (ಗುತ್ತಿಗೆದಾರರು) ಬ್ಯಾರೇಜ್‌ಗಳನ್ನು ನಿರ್ವಹಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷ ಬ್ಯಾರೇಜ್‌ಗಳ ನಿರ್ವಹಣೆಗೆ ಸರ್ಕಾರ ಹಣವೇ ನೀಡಿಲ್ಲ. ಇದರಿಂದ ಬ್ಯಾರೇಜು ಅನಾಥ ಪ್ರಜ್ಞೆಗೆ ಒಳಗಾಗುವಂತಾಗಿವೆ. ಬ್ಯಾರೇಜ್‌ಗಳ ನಿರ್ವಹಣೆಗೆ ಅನುದಾನ ನಿಗದಿಪಡಿಸಿ ಟೆಂಡರ್ ಕರೆಯಲಾಗುತ್ತಿತ್ತು.
ಪ್ರಸಕ್ತ ವರ್ಷ ಡಿಸೆಂಬರ್ ತಿಂಗಳ ಎರಡು ವಾರಗಳು ಗತಿಸಿ ಮೂರನೇ ವಾರಕ್ಕೆ ಪಾದಾರ್ಪಣೆ ಮಾಡಿದರೂ ಟೆಂಡರ್ ಕರೆದಿಲ್ಲ. ಅನುದಾನವೂ ನಿಗದಿಯಾಗಿಲ್ಲ. ಹೀಗಾಗಿ ಅಧಿಕಾರಿಗಳು ವೇತನದ ಹಣದಿಂದಲೇ ಬ್ಯಾರೇಜ್ ನಿರ್ವಹಣೆ ಮಾಡುವ ದುಸ್ಥಿತಿ ಎದುರಾಗಿದೆ. ಇದರಿಂದ ಹಲವು ಬ್ಯಾರೇಜ್‌ಗಳಿಗೆ ಗೇಟ್‌ಗಳೇ ಅಳವಡಿಸಿಲ್ಲ ಎಂದು ರೈತರು ದೂರಿದ್ದಾರೆ.
ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ಎರಡು ಬ್ಯಾರೇಜ್‌ಗಳಿವೆ ಆದರೆ ಇವುಗಳಿಗೆ ಗೇಟ್‌ಗಳೇ ಅಳವಡಿಸಿಲ್ಲ. ಇಲ್ಲಿ ಮಾಜಿ ಸಚಿವ ಸುನೀಲ ವಲ್ಯಾಪುರೆ ಶಾಸಕರಾಗಿದ್ದ ಅವಧಿಯಲ್ಲಿ ಒಂದು ಬ್ಯಾರೇಜ್ ನಿರ್ಮಾಣವಾಗಿದ್ದರೆ, ಇನ್ನೊಂದು ಬ್ಯಾರೇಜ್ ಕೆಕೆಆರ್‌ಡಿಬಿ ಅನುದಾನದಲ್ಲಿ ಶಾಸಕ ಡಾ. ಅವಿನಾಶ ಜಾಧವ ಅವರ ಮೊದಲ ಅವಧಿಯಲ್ಲಿ ನಿರ್ಮಾಣವಾಗಿದೆ. ಆದರೆ ಇವುಗಳಿಗೆ ಗೇಟ್ ಅಳವಡಿಸದಿರುವುದರಿಂದ ಬ್ಯಾರೇಜ್ ನಿರ್ಮಾಣದ ಉದ್ದೇಶ ವ್ಯರ್ಥವಾದಂತಾಗಿದೆ.
ಕನಕಪುರ ಹಳೆ ಮತ್ತು ಹೊಸ ಗೌಡನಹಳ್ಳಿ, ಕೊಟಗಾ, ನೀಮಾ ಹೊಸಳ್ಳಿ ಬ್ಯಾರೇಜ್‌ಗಳಿಗೂ ಗೇಟ್ ಅಳವಡಿಸಿಲ್ಲ. ಪೋಲಕಪಳ್ಳಿ, ಅಣವಾರ ಬ್ಯಾರೇಜ್‌ಗಳಿಗೂ ಗೇಟು ಅಳವಡಿಸಿಲ್ಲ ಎಂದು ರೈತ ಮುಖಂಡ ವೀರಶೆಟ್ಟಿ ಪಾಟೀಲ ತಿಳಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗಣ್ಣಗೌಡ ಅವರನ್ನು ಸಂಪರ್ಕಿಸಿದಾಗ,‘ಗೇಟ್ ಅಳವಡಿಸಲು ಸೂಚಿಸಿದ್ದೇವೆ. ಎಲ್ಲ ಬ್ಯಾರೇಜ್‌ಗಳಿಗೆ ಎಂಜಿನೀಯರ್‌ಗಳು ಗೇಟ್ ಹಾಕಲಿದ್ದಾರೆ’ ಎಂದರು.
ತಾಲ್ಲೂಕಿನಲ್ಲಿ 19ಕ್ಕೂ ಬ್ಯಾರೇಜ್‌ಗಳಿವೆ ಇವುಗಳಿಗೆ ಗೇಟ್ ಅಳವಿಡಸುವ ಕೆಲಸ ಪ್ರಗತಿಯಲ್ಲಿದೆ. ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ 5 ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸಬೇಕಿದೆ. ಚಿಕ್ಕಪುಟ್ಟ ತೊರೆಗಳಿಗೆ ನಿರ್ಮಿಸಿದ ಬ್ಯಾರೇಜ್‌ಗಳಿಗೆ ಆದ್ಯತೆ ಮೇಲೆ ಗೇಟು ಅಳವಡಿಸಿದ್ದೇವೆ. ಈಗ ಮುಲ್ಲಾಮಾರಿ ನದಿಯ ಬ್ಯಾರೇಜ್‌ಗಳಿಗೆ ಗೇಟ್ ಅಳಡಿಸಲಾಗುವುದು ಚಿಂಚೋಳಿ ಉಪ ವಿಭಾಗದ ಎಇಇ ಶಿವಾಜಿ ಜಾಧವ ತಿಳಿಸಿದರು.
ಇರಗಪಳ್ಳಿ–ಬುರುಗಪಳ್ಳಿ ಮಧ್ಯೆ ಕೆಳದಂಡೆ ಮುಲ್ಲಾಮಾರಿ ಯೋಜನೆ ಉಪ ವಿಭಾಗದ ವತಿಯಿಂದ ನಿರ್ಮಿಸಿದ ಬ್ಯಾರೇಜ್‌ಗೆ ಜನವರಿ ಮೊದಲ ವಾರದ ಒಳಗಾಗಿ ಗೇಟ್ ಅಳವಡಿಸಲಾಗುವುದು. ಈಗ ಟೆಂಡರ್ ಕರೆಯಲಾಗಿದೆ ಎಂದು ಸಹಾಯಕ ಎಂಜಿನಿಯರ್ ವಿನಾಯಕ ಚವ್ಹಾಣ ತಿಳಿಸಿದರು.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೈತರ ಅನುಕೂಲಕ್ಕಾಗಿ ಬ್ಯಾರೇಜು ನಿರ್ಮಿಸಿ ಗುತ್ತಿಗೆದಾರರು ಜೇಬು ತುಂಬಿಕೊಂಡಿದ್ದಾರೆ ಗೇಟು ಅಳವಡಿಸದ ಕಾರಣ ಬ್ಯಾರೇಜು ನಿರ್ಮಾಣದ ಉದ್ದೇಶ ಈಡೇರಿಸುತ್ತಿಲ್ಲಶ್ರೀಧರ ವಗ್ಗಿ ಸಾಮಾಜಿಕ ಕಾರ್ಯಕರ್ತ ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.