ಸೇಡಂ ಸಮೀಪದ ಪ್ರಕೃತಿ ನಗರದಲ್ಲಿ ಸೋಮವಾರ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ಸ್ವಯಂ ಉದ್ಯೋಗ ಸಮಾವೇಶವನ್ನು ಉದ್ಯಮಿ ರಾಹುಲ್ ಮಹಾಗಾಂವಕರ್ ಉದ್ಘಾಟಿಸಿದರು.
ಪ್ರಕೃತಿ ನಗರ (ಸೇಡಂ): ‘ಉದ್ಯಮಿಯಾಗಲು ಹೊರಟವರ ಮನದಲ್ಲಿ ಉದ್ಯಮಿಶೀಲತೆಯ ಮನಸ್ಥಿತಿ ಇರಬೇಕು. ಅದರ ಜೊತೆಗೆ ತಲೆಯಲ್ಲಿ ಹುಚ್ಚು ಮತ್ತು ಎದೆಯಲ್ಲಿ ಕಿಚ್ಚಿಟ್ಟುಕೊಂಡು ಪ್ರಾಮಾಣಿಕವಾಗಿ ಮುನ್ನುಗ್ಗಬೇಕು’ ಎಂದು ಮೈಂಡ್‌ಸೆಟ್ ತರಬೇತುದಾರ, ಚಿಂತಕ ಮಹೇಶ ಮಾಶಾಳ ಹೇಳಿದರು.
ಪಟ್ಟಣದ ಹೊರವಲಯದ ಬೀರನಹಳ್ಳಿ ಕ್ರಾಸ್ ಸಮೀಪದಲ್ಲಿ ನಿರ್ಮಿಸಿರುವ ಪ್ರಕೃತಿ ನಗರದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದ ‘ಸ್ವಯಂ ಉದ್ಯೋಗ ಸಮಾವೇಶ’ದಲ್ಲಿ ಸೋಮವಾರ ಅವರು ಮಾತನಾಡಿದರು.
‘ಪ್ರತಿಯೊಬ್ಬರಿಗೂ ಕಣ್ಣೀರು, ಬಡತನ, ಅವಮಾನ ಮತ್ತು ಸೋಲು ಎಂಬುದು ಬೆಂಕಿ ಇದ್ದಂತೆ. ಅವುಗಳ ಬಗ್ಗೆ ಚಿಂತಿಸುತ್ತಾ ಕುಳಿತರೆ ನಮ್ಮನ್ನೇ ಸುಡುತ್ತವೆ. ಅದೇ ಬೆಂಕಿಯನ್ನು ಎದೆಯಲ್ಲಿ ಹಾಕಿಕೊಂಡರೆ ಕಿಚ್ಚಾಗುತ್ತದೆ. ತಲೆಯಲ್ಲಿ ಹುಚ್ಚು ಮತ್ತು ಎದೆಯಲ್ಲಿ ಕಿಚ್ಟು ಇರಿಸಿಕೊಂಡು ಸಾಗಿದವರೇ ಮುಂದೆ ಸಾಧಕರಾಗಿದ್ದಾರೆ’ ಎಂದರು.
‘ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ನಿಜವಾದ ಉದ್ಯಮಿಶೀಲತೆ. ಸಮಸ್ಯೆಗಳಿದ್ದಲ್ಲೇ ವ್ಯವಹಾರ ಮಾಡುವ ಅವಕಾಶಗಳೂ ಇರುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ವ್ಯವಹಾರ ಮಾಡುವ ಮನಸ್ಥಿತಿ ಬರಬೇಕಿದೆ. ವ್ಯವಹಾರದ ಮನಸ್ಥಿತಿಯಿಂದಾಗಿ ಇಲ್ಲಿನ ಪರಿಸ್ಥಿತಿಯೂ ಬದಲಾಗುತ್ತದೆ’ ಎಂದು ಹೇಳಿದರು.
‘ಭಾರತದ ಪೋಷಕರು ತಮ್ಮ ಮಕ್ಕಳ ತಲೆಯಲ್ಲಿ ನೌಕರಿಯ ವಿಚಾರಗಳನ್ನೇ ತುಂಬುತ್ತಿರುವುದು ವಿಷಾದಕರ ಸಂಗತಿ. ಕಳೆದ 10 ವರ್ಷಗಳಲ್ಲಿ 22 ಕೋಟಿ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದಾರೆ. ಅದರಲ್ಲಿ ಶೇ 0.2ರಷ್ಟು ಯುವಕರು ಮಾತ್ರವೇ ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ಉನ್ನತ ಶಿಕ್ಷಣ ಪಡೆದು ಹೊರಬರುವ ಒಂದು ಕೋಟಿ ಯುವಕರಲ್ಲಿ 92 ಲಕ್ಷ ಯುವಕರು ನಿರುದ್ಯೋಗಿಗಳು ಆಗುತ್ತಿದ್ದಾರೆ. ಹೀಗಾಗಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸ್ವಯಂ ಉದ್ಯೋಗವೇ ಪರಿಹಾರ’ ಎಂದರು.
ಎಸ್‌ಕೆಎಸ್ ಗ್ಲೋಬಲ್ ಕನ್ಸಲ್ಟಿಂಗ್ ಇಂಪೋರ್ಟ್ ಆ್ಯಂಡ್ ಎಕ್ಸ್‌ಪೋರ್ಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಮಹಾಗಾಂವಕರ್ ಮಾತನಾಡಿ, ‘ನೌಕರಿ ಬಿಟ್ಟು ಉದ್ಯಮಿಯಾಗುತ್ತೇನೆ ಎಂದು ಹೊರಟವರಿಗೆ ಮೊದಲ ವಿರೋಧ ಬರುವುದೇ ನಮ್ಮ ಹತ್ತಿರದ ಬಂಧುಗಳಿಂದ. ಎದುರಾಗುವ ಸವಾಲುಗಳನ್ನು ಬದಿಗೆ ತಳ್ಳಿ, ನಿರ್ದಿಷ್ಟ ಗುರಿ ಮತ್ತು ಸರಿಯಾದ ಮಾರ್ಗ ತೋರಿಸಿ, ಪ್ರೇರಣೆ ನೀಡುವ ಗುರು ಇದ್ದರೆ ಉದ್ಯಮಿಯಾಗುವುದು ಸುಲಭ’ ಎಂದರು.
‘ನೌಕರಿ ಮಾಡುವುದು ತಪ್ಪಲ್ಲ. ಆದರೆ, ನೌಕರಿಯ ಮನಸ್ಥಿತಿಯಲ್ಲೇ ಜೀವನ ಕಳೆಯುವುದು ತಪ್ಪು. ಸಣ್ಣ ಕನಸುಗಳನ್ನು ಇರಿಸಿಕೊಂಡು ಸಂಕುಚಿತವಾಗಿ ಬದುಕುವುದು ಮತ್ತು ಗಡಿಯಾರದ ಚಕ್ರದ ಸುತ್ತ ಕೆಲಸ ಮಾಡುವುದನ್ನು ಬಿಟ್ಟು ಸವಾಲುಗಳನ್ನು ಸ್ವೀಕರಿಸಿ ಉದ್ಯಮ ಜಗತ್ತಿಗೆ ಇಳಿಯಬೇಕು. ನಿಮ್ಮದೇ ಬ್ರ್ಯಾಂಡ್ ನೇಮ್ ಮಾಡಿಕೊಂಡು ಉದ್ಯಮಿಗಳಾದರೆ ನೌಕರಿಯಲ್ಲಿ ಸಿಗದ ಸ್ವಾತಂತ್ರ್ಯ ಉದ್ಯಮಶೀಲತೆಯಲ್ಲಿ ಸಿಗುತ್ತದೆ. ಆಗ, ವೈಯಕ್ತಿಕ ಮತ್ತು ಕುಟುಂಬದ ಆಸೆಗಳನ್ನು ಈಡೇರಿಸಿ ನಿತ್ಯ ಹೊಸತನ್ನು ಕಲಿಯಬಹುದು’ ಎಂದು ಹೇಳಿದರು.
ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಮಾಜಿ ನಿರ್ದೇಶಕ ಡಾ. ರಮೇಶ ರಾಮಚಂದ್ರ ಬೊಂದೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಉತ್ತಮ್ ಬಜಾಜ್, ಪ್ರಮುಖರಾದ ನಿತೇಶ್ವರ ಕುಮಾರ್, ಬಸವರಾಜ ಬಾಯರೆಡ್ಡಿ, ಸತೀಶ ಜಿ. ಶೆಟ್ಟಿ ಉಪಸ್ಥಿತರಿದ್ದರು.
‘ಜ್ಞಾನಿಗಳು ಅನ್ಯರ ಮುಂದೆ ಕೈಚಾಚಬಾರದು’
‘ಪೂರ್ವಜರು ನಮಗೆ ಕೊಡುವುದನ್ನು ಕಲಿಸಿದ್ದರು. ಆದರೆ ನಾವು ಸ್ವಾತಂತ್ರ್ಯದ ಬಳಿಕ ಎಂ.ಎ ಪಿಎಚ್‌ಡಿ ಮುಗಿಸಿದವರು ಒಂದು ಹುದ್ದೆ ಸಣ್ಣ ಬಡ್ತಿಗಾಗಿ ಇನ್ನೊಬ್ಬರ ಮುಂದೆ ನಾಯಿಯಂತೆ ಕೈಚಾಚುವ ದೃಶ್ಯವನ್ನು ಕಂಡಿದ್ದೇನೆ’ ಎಂದು ಭಾರತೀಯ ವಿಕಾಸ ಸಂಗಮದ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಹೇಳಿದರು. ‘ಜ್ಞಾನಿಗಳಾದವರು ಇನ್ನೊಬ್ಬರ ಮುಂದೆ ಕೈಚಾಚಬಾರದು. ಅನ್ಯರಿಗೆ ಕೈ ಎತ್ತಿಕೊಡುವವರು ಆಗಬೇಕು. ದೇಶಕ್ಕೆ ಮುಕುಟಮಣಿ ಆಗಬೇಕಾದ ಯುವಶಕ್ತಿ ಭಿಕಾರಿಯಂತೆ ಇನ್ನೊಬ್ಬರ ಮುಂದೆ ಕೈಚಾಚಿದರೆ ಭಾರತ ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.