ಸೇಡಂನ ಪ್ರಕೃತಿ ನಗರದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ದೇಶ– ಧರ್ಮ– ಸಂಸ್ಕೃತಿ ಸಮಾವೇಶದಲ್ಲಿ ಗುರುವಾರ ಶ್ರೀಶೈಲದ 1008 ಗಿರಿರಾಜ ಸೂರ್ಯಸಿಂಹಾಸನಾದೀಶ್ವರ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಮಾತನಾಡಿದರು
ಪ್ರಕೃತಿ ನಗರ (ಸೇಡಂ): ‘ಕಾವಿ ಧರಿಸಿದ ಸನ್ಯಾಸಿಗಳು ಪ್ರಸಂಗ ಬಂದರೆ ಧರ್ಮ ಮತ್ತು ದೇಶದ ರಕ್ಷಣೆಗಾಗಿ ಸೈನಿಕರಾಗಲು ಸಿದ್ಧರಾಗಬೇಕು. ಸೈನಿಕರು ಸಹ ಧರ್ಮ ಮತ್ತು ಸಂಸ್ಕೃತಿಯ ರಕ್ಷಿಸಲು ಸನ್ಯಾಸಿಗಳಾಗಲು ಸನ್ನದ್ಧರಾಗಬೇಕು’ ಎಂದು ಶ್ರೀಶೈಲದ 1008 ಗಿರಿರಾಜ ಸೂರ್ಯಸಿಂಹಾಸನಾದೀಶ್ವರ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಹೇಳಿದರು.
ಪಟ್ಟಣದ ಹೊರವಲಯದ ಬೀರನಹಳ್ಳಿ ಕ್ರಾಸ್ ಸಮೀಪದಲ್ಲಿ ನಿರ್ಮಿಸಿರುವ ಪ್ರಕೃತಿ ನಗರದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ದೇಶ– ಧರ್ಮ– ಸಂಸ್ಕೃತಿ ಸಮಾವೇಶದಲ್ಲಿ ಗುರುವಾರ ಅವರು ಮಾತನಾಡಿದರು.
‘ಸೈನಿಕರು ದೇಶದ ಗಡಿ ಕಾಯುವಂತೆ ಬೇರೆ ಬೇರೆ ಪರಂಪರೆಯ ಮಠಾಧೀಶರು ಧರ್ಮ ಮತ್ತು ಸಂಸ್ಕೃತಿಯ ಕಾವಲುಗಾರರು ಆಗಿದ್ದಾರೆ. ದೇಶ ಉಳಿದರೆ ಮಾತ್ರ ನಮ್ಮ ಧರ್ಮಗಳು ಮತ್ತು ಸಂಸ್ಕೃತಿ ಉಳಿಯುತ್ತವೆ. ಹೀಗಾಗಿ, ಧರ್ಮ ಮತ್ತು ಸಂಸ್ಕೃತಿಯ ಜತೆಗೆ ದೇಶ ಉಳಿಸಲು ಎಲ್ಲ ಮಠಾಧೀಶರು ಪಣತೊಡಬೇಕು. ಅದು ನಮ್ಮಲ್ಲರ ಪರಮ ಕರ್ತವ್ಯವೂ ಆಗಬೇಕು’ ಎಂದರು.
‘ಆಯಾ ಧರ್ಮ ಪರಂಪರೆಗಳ ಬಹಿರಂಗ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ ಧರ್ಮಗಳ ಮೂಲ ತತ್ವಗಳು, ಸಾಮಾಜಿಕ ಸಂದೇಶ ಹಾಗೂ ಮೌಲ್ಯಗಳನ್ನು ಅರ್ಥೈಸಿಕೊಳ್ಳಬೇಕು. ದೇಶದ ವಿಚಾರ ಬಂದಾಗ ಎಲ್ಲ ಧರ್ಮದವರು ಒಂದಾಗಿ ಭಾರತ ಉಳಿಸುವುದರತ್ತ ಗಮನ ಕೊಡಬೇಕು’ ಎಂದು ಹೇಳಿದರು.
‘ದೇಶದಲ್ಲಿರುವ ಎಲ್ಲ ಧರ್ಮಗಳು ಭಾರತದ ಧರ್ಮಗಳೇ ಆಗಿವೆ. ದೇಶದಲ್ಲಿರುವ ಮುಸ್ಲಿಂ, ಕ್ರಿಶ್ಚಿಯನರು ತಾವು ಭಾರತೀಯರು ಎಂಬ ಭಾವ ಇಟ್ಟುಕೊಳ್ಳಬೇಕು. ರಾಷ್ಟ್ರ ಧ್ವಜ ಹಿಡಿಯದವರು, ಪಾಕಿಸ್ತಾನಕ್ಕೆ ಬೆಂಬಲಿಸುವವರು ಯಾವುದೇ ಧರ್ಮದವರಿದ್ದರು ಅವರು ದೇಶದ್ರೋಹಿಗಳು’ ಎಂದರು.
ಭಾರತೀಯ ವಿಕಾಸ ಸಂಗಮದ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ದೇಶಭಕ್ತಿ ದುರ್ಬಲವಾಗಿ ದೇಶದಲ್ಲಿ ಅರಾಜಕತೆ ಆಗಬಾರದೆಂದರೆ ಧರ್ಮಗುರುಗಳು ತಮ್ಮ ಧರ್ಮ ದಂಡದ ಮೂಲಕ ದೇಶ ಆಳುವವರನ್ನು ನಿಯಂತ್ರಿಸಬೇಕು. ಭದ್ರವಾದ ದೇಶಕಟ್ಟಲು ಶಕ್ತಿಯುತವಾದ ಧರ್ಮದಂಡದ ಅವಶ್ಯವಿದೆ’ ಎಂದು ಹೇಳಿದರು.
ವಿಭು ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷೆ ವಿ.ಬಿ. ಆರತಿ ಮಾತನಾಡಿ, ‘ಭಾರತೀಯ ಶಿಕ್ಷಣಕ್ಕೆ ಸಂಸ್ಕೃತ ಮತ್ತು ದೇಶಿ ಭಾಷೆಗಳೇ ತಾಯಿ ಬೇರಾಗಿವೆ. ಅವುಗಳಲ್ಲಿನ ಸಂಸ್ಕೃತಿಯ ಪ್ರಜ್ಞೆಯ ನಿಧಿ ಕಳೆದು ಹೋಗಲೆಂದು ಮೆಕಾಲೆ ಶಿಕ್ಷಣ ಪದ್ಧತಿ ಮೂಲಕ ವಿಷವನ್ನು ಹಾಕಿದ್ದಾರೆ. ನಮ್ಮ ಅಸ್ಮಿತೆಯನ್ನು ಮರೆಯುವಂತಹ ವಿಷದ ಇಂಜೆಕ್ಷನ್ ಸಹ ಕೊಟ್ಟಿದ್ದಾರೆ. ಇದರಿಂದಾಗಿ ನಮ್ಮ ಮಕ್ಕಳಿಗೆ ವೇದ, ಶಾಸ್ತ್ರ, ರಾಮಾಯಣ, ಭಾಗವತ ಓದಲು ಆಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.