ADVERTISEMENT

ಅಫಜಲಪುರ: ಭೀಮಾ ನದಿಗೆ 2.30 ಲಕ್ಷ ಕ್ಯೂಸೆಕ್ ನೀರು

ಘತ್ತರಗಾ, ದೇವಲ್ ಗಾಣಗಾಪುರದ ಸೇತುವೆ ಮುಳುಗಡೆ, 4 ನೇ ದಿನವೂ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:17 IST
Last Updated 24 ಸೆಪ್ಟೆಂಬರ್ 2025, 4:17 IST
ಅಫಜಲಪುರ ತಾಲೂಕಿನ ಮಣ್ಣೂರ ಎಲ್ಲಮ್ಮ ದೇವಿಯ ದೇವಸ್ಥಾನ ಮಂಗಳವಾರ ಮುಳುಗಡೆ ಆಗಿರುವುದು
ಅಫಜಲಪುರ ತಾಲೂಕಿನ ಮಣ್ಣೂರ ಎಲ್ಲಮ್ಮ ದೇವಿಯ ದೇವಸ್ಥಾನ ಮಂಗಳವಾರ ಮುಳುಗಡೆ ಆಗಿರುವುದು   

ಅಫಜಲಪುರ: ‘ಮಹಾರಾಷ್ಟ್ರದ ಉಜನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್, ಸೀನಾ ನದಿಯಿಂದ 1.60 ಲಕ್ಷ ಕ್ಯೂಸೆಕ್ ಸೇರಿ ಭೀಮಾ ನದಿಗೆ ಒಟ್ಟು 2.30 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ’ ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ್ ತಿಳಿಸಿದರು.

ಈ ಕುರಿತು ಅವರು ಮಂಗಳವಾರ ಮಾಹಿತಿ ನೀಡಿದ ಅವರು, ‘ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ ಬಿಟ್ಟಿರುವ ನೀರು ಅಫಜಲಪುರ ತಾಲ್ಲೂಕಿನ ಭೀಮಾ ನದಿಗೆ ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಿಗ್ಗೆ ಬಂದು ತಲುಪಲಿದೆ. ಆದ್ದರಿಂದ ಭೀಮಾ ನದಿ ದಂಡೆಯಲ್ಲಿರುವ ವಿದ್ಯುತ್ ಪಂಪ್‌ಸೆಟ್, ಜಾನುವಾರಗಳನ್ನ ರೈತರು ಸುರಕ್ಷಿತ ಕಡೆಗೆ ಸ್ಥಳಾಂತರ ಮಾಡಬೇಕು. ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ತಿಳಿಸಿದರು.

‘ಸೋಮವಾರ ಸಂಜೆ 6 ಗಂಟೆ ವೇಳೆಗೆ ಭೀಮಾ ಜಲಾಶಯಕ್ಕೆ 1.60 ಲಕ್ಷ ಕ್ಯೂಸೆಕ್ ನೀರು ಬರುತ್ತಿತ್ತು. ಅದೇ ಪ್ರಮಾಣದಲ್ಲಿ 28 ಗೇಟ್ ತೆರೆದು ಭೀಮಾನದಿಯ ಕೆಳಗಿನ ಭಾಗಕ್ಕೆ ನೀರು ಬಿಡಲಾಗುತ್ತಿದೆ. ಇನ್ನೂ ನೀರಿನ ಒಳಹರಿವು ಹೆಚ್ಚಾಗಲಿದ್ದು, ಹೆಚ್ಚಿನ ನೀರು ನದಿಯ ಕೆಳಭಾಗಕ್ಕೆ ಬಿಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

ಭೀಮಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ತಾಲ್ಲೂಕಿನ ಘತ್ತರಗಾ, ದೇವಲ್ ಗಾಣಗಾಪುರದ ಸೇತುವೆಗಳು ಸತತ 4 ದಿನಗಳಿಂದ ಮಳುಗಡೆಯಾಗಿವೆ. ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ. ಅಲ್ಲದೆ ಸಿದ್ದನೂರು- ರೇವೂರು, ಜೇವರ್ಗಿ ಬಿ - ಜೇವರ್ಗಿ ಕೆ ಗ್ರಾಮಗಳ ಮಧ್ಯೆ ಇರುವ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ನದಿ ದಡದ ಶೇಷಗಿರಿ, ಮಣ್ಣೂರ, ಕುಡಗನೂರ, ಶಿವೂರ, ಉಡಚಣ, ಉಡಚಣಹಟ್ಟಿ, ಭೊಸಗಾ, ದುದ್ದುಣಗಿ, ಮಂಗಳೂರ, ಹಿರಿಯಾಳ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿ ಆಗಿದೆ.

ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಅಮರಜಾ- ಭೀಮಾ ಸಂಗಮ ಮಂಗಳವಾರ ಮುಳುಗಡೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.