ಕಲಬುರಗಿ: ಭೀಮಾ ನದಿಯ ನಮ್ಮ ಹಕ್ಕಿನ 15 ಟಿಎಂಸಿ ಅಡಿ ನೀರು ಸಮಪರ್ಕವಾಗಿ ಬಳಕೆ ಆಗಿಲ್ಲ, ಬಳಕೆ ಆಗುವಂತೆ ಮಾಡಬೇಕು. ಮಹಾರಾಷ್ಟ್ರ ಸರ್ಕಾರ ಕೇಂದ್ರೀಯ ಜಲ ಆಯೋಗದ ಸಮ್ಮತಿ ಇಲ್ಲದೆಯೇ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ರಾಜ್ಯ ಇದಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಒತ್ತಾಯಿಸಿದರು.
ವಿಧಾನಮಂಡಲ ಕಲಾಪದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಅವರು, ‘ಬೇಸಿಗೆ ಕಾಲದಲ್ಲಿ ನಮಗೂ ಭೀಮಾ ನದಿಯಲ್ಲಿ ನೀರು ಸಂಗ್ರಹವಾಗುವಂತೆ ನಿಯಮ ರೂಪಿಸಬೇಕು, ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರೀಯ ಜಲ ಆಯೋಗದ ಮುಂದೆ ತಕರಾರು ಅರ್ಜಿ ಸಲ್ಲಿಸಿ ಗಮನ ಸೆಳೆಯಬೇಕು’ ಎಂದರು.
‘ಮಹಾರಾಷ್ಟ್ರದ ಭೀಮಾಶಂಕರದಲ್ಲಿ ಹುಟ್ಟಿ ಒಟ್ಟು 786 ಕಿ.ಮೀ ಹರಿಯುವ ಈ ನದಿಯು ಕರ್ನಾಟಕದಲ್ಲಿಯೇ 289 ಕಿ.ಮೀ ಹರಿಯುತ್ತದೆ. ನದಿಯ ಎರಡು ದಡದಲ್ಲಿ ಒಟ್ಟು 164 ಹಳ್ಳಿಗಳ ಲಕ್ಷಾಂತರ ಜನ ಮತ್ತು ಜಾನುವಾರುಗಳು ಭೀಮಾ ನದಿಯ ನೀರನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಜಲಸಂಪನ್ಮೂಲ ಮಂಡಳಿಯ ಅನುಮತಿಯನ್ನು ಪಡೆಯದೇ ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿ ಅಕ್ರಮವಾಗಿ ಸುಮಾರು 25 ಕಿ.ಮೀ ಉದ್ದದ ಸುರಂಗ ಮಾರ್ಗ ಕೊರೆದು ಸೀನಾ ನದಿಗೆ ಸಂಪರ್ಕ ಕಲ್ಪಿಸಿರುವುದರಿಂದ 13.5 ಟಿಎಂಸಿ ನೀರು ಸೀನಾ ನದಿಗೆ ಸೇರ್ಪಡೆ ಆಗುತ್ತಿದೆ. ಉಜನಿ ಅಣೆಕಟ್ಟನ್ನು ಕೇಂದ್ರ ಜಲಸಂಪನ್ಮೂಲ ಮಂಡಳಿಯ ಅನುಮತಿ ಇಲ್ಲದೇ 3 ಮೀಟರ್ ಎತ್ತರಿಸಿ 7 ಟಿಎಂಸಿ ನೀರನ್ನು ಅಧಿಕವಾಗಿ ಸಂಗ್ರಹಿಸಲು ಆರಂಭಿಸಿ ಈಗಾಗಲೇ 6ರಿಂದ 7 ವರ್ಷಗಳಾಗಿವೆ. ತೀರ್ಪಿನ ಬಳಿಕ ಕೆಲವೇ ವರ್ಷ ನೀರು ಹರಿಸಿದ್ದು ಬಿಟ್ಟರೆ ಇಲ್ಲಿಯವರೆಗೂ ಒಮ್ಮೆಯೂ ನಮ್ಮ ಹಕ್ಕಿನ 15 ಟಿಎಂಸಿ ನೀರನ್ನು ಮಹಾರಾಷ್ಟ್ರ ಹರಿಸಿಲ್ಲ. ಮಹಾರಾಷ್ಟ್ರ ತನ್ನ ಪಾಲಿನ ನೀರಿಗಿಂತ ಹೆಚ್ಚಿನ ಪ್ರಮಾಣ ನೀರು ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ರಾಜ್ಯ ಸರ್ಕಾರ ಪ್ರಶ್ನಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.