
ಕಲಬುರಗಿ: ಭೀಮಾ ನದಿ ನೀರಿನ ನಮ್ಮ ಪಾಲಿನ 15 ಟಿಎಂಸಿ ಅಡಿ ನೀರು ಬಳಸಲು ಮಹಾರಾಷ್ಟ್ರ ಅವಕಾಶ ನೀಡದೆ ತಾನೇ ಹೆಚ್ಚಿನ ನೀರನ್ನು ಬಳಸುತ್ತಿದೆ. ಹೀಗಾಗಿ ಭೀಮಾ ನದಿ ತೀರದಲ್ಲಿ ನೀರಿನ ಹಾಹಾಕಾರ ಉಂಟಾಗುತ್ತಿದೆ. ಮಹಾರಾಷ್ಟ್ರದವರು ಭೀಮಾ ಪ್ರವಾಹವನ್ನೇ ಸೀನಾ ನದಿಗೆ ಹೊರಳಿಸಿದ್ದು ಅವೈಜ್ಞಾನಿಕ ಹಾಗೂ ಮೋಸದ ಯೋಜನೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಭೀಮಾ ಪಾಲಿನ ನಮ್ಮ ಹಕ್ಕು ಪ್ರತಿಪಾದಿಸಲು ರಾಜ್ಯ ಸರ್ಕಾರ ಕೇಂದ್ರ ಜಲ ಆಯೋಗದ ಮೊರೆ ಹೋಗಬೇಕು. ಬಚಾವತ್ ತೀರ್ಪಿನಂತೆ ನಮಗೆ 15 ಟಿಎಂಸಿ ಅಡಿ ನೀರು ಬಳಸಲು ಅವಕಾಸವಿತ್ತು. ಆದರೆ ಮಹಾರಾಷ್ಟ್ರ ತನ್ನಲ್ಲೇ ನದಿ ಹುಟ್ಟಿರುವುದರಿಂದ ನೀರನ್ನು ಹೆಚ್ಚಿಗೆ ಕಬಳಿಸುತ್ತಿದೆ. ಸಿಡಬ್ಲೂಸಿ ಅನುಮತಿ ಇಲ್ಲದೆ ಯೋಜನೆ ರೂಪಿಸುತ್ತಿದೆ. ಭೀಮಾ ನದಿಗೆ ಸೀನಾ ನದಿ ಜೋಡಿಸಿ ಹೆಚ್ಚಿನ ನೀರನ್ನು ಬಳಸುತ್ತಿದೆ. ಇವೆಲ್ಲವೂ ಪರವಾನಗಿ ಇಲ್ಲದ ಯೋಜನೆಗಳು. ಇವನ್ನೆಲ್ಲ ರಾಜ್ಯ ಪ್ರಶ್ನಿಸಲಿ’ ಎಂದರು.
‘ಭೀಮಾ ನದಿಯಲ್ಲಿ ಮಹಾ ಮೋಸ ಅಕ್ಷಮ್ಯ. ಇದರಿಂದಾಗಿ ಕಲಬುರಗಿ, ವಿಜಯಪುರ, ಯಾದಗಿರಿ ಜನರಿಗೆ ಭೀಮಾ ನೀರಿನ ಪ್ರಯೋಜನ ಸಿಗದಂತಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿಬಿಟ್ಟು ನಮಗೆಲ್ಲ ನೆರೆ ಹಾವಳಿ ಉಂಟು ಮಾಡಿ ಜನ–ಜಾನುವಾರು ಬೆಳೆ ಹಾನಿಗೆ ಕಾರಣವಾಗುವ ಮಹಾರಾಷ್ಟ್ರ ಬೇಸಿಗೆಯಲ್ಲಿ ತನ್ನಲ್ಲಿ ನೀರಿದ್ದರೂ ಭೀಮಾ ನದಿ ಅಣೆಕಟ್ಟೆಯಿಂದ ನೀರು ಹರಿಸುವುದಿಲ್ಲ. ಮಹಾರಾಷ್ಟ್ರದ ಈ ಮೊಂಡುತನ ನಾವು ಆಯೋಗದ ಮುಂದೆ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿದೆ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.