ಕಲಬುರಗಿ: 'ಬಿಹಾರದಲ್ಲಿ ಭಾರತ ಚುನಾವಣಾ ಆಯೋಗವು ಮತಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತ ಚಲಾವಣೆಯ ಹಕ್ಕನ್ನು ನಿರಾಕರಿಸುವುದನ್ನು ನಿಲ್ಲಿಸಬೇಕು ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು' ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ನಗರದ ಎಸ್.ವಿ.ಪಿ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ವಿ.ಜಿ.ದೇಸಾಯಿ, ಎಸ್.ಎಂ.ಶರ್ಮಾ ಮಾತನಾಡಿ, ‘ಬಿಹಾರದಲ್ಲಿ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದರ ಪೂರ್ವ ತಯಾರಿಯಾಗಿ ಚುನಾವಣಾ ಆಯೋಗವು ಎಸ್‌ಐಆರ್ ಹೆಸರಿನ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಈ ಹಿಂದೆ ಆಯೋಗವು ರಾಜ್ಯದಲ್ಲಿ 7.89 ಕೋಟಿ ಮತದಾರರಿದ್ದಾರೆ ಎಂದು ಹೇಳಿತ್ತು. ಈಗ ಮೊದಲ ಕರಡು ಪರಿಷ್ಕೃತ ಪಟ್ಟಿಯಲ್ಲಿ 65 ಲಕ್ಷ ಹೆಸರುಗಳನ್ನು ಸೇರಿಸದೆ, ರಾಜ್ಯದ ಮತದಾರರ ಒಟ್ಟು ಸಂಖ್ಯೆಯನ್ನು 7.24 ಕೋಟಿ ಎಂದು ತೋರಿಸಲಾಗಿದೆ’ ಎಂದು ಆರೋಪಿಸಿದರು.
‘ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಹೋದರೆ ಅಂಥವರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಮೃತರು, ವಲಸೆ ಹೋದವರು, ಪೌರತ್ವದ ದಾಖಲೆ ನೀಡಲಾಗದವರನ್ನು ಪಟ್ಟಿಯಲ್ಲಿ ಸೇರಿಸಿಲ್ಲ ಎಂಬುದು ಚುನಾವಣಾ ಆಯೋಗದ ಸಮರ್ಥನೆ. ಪಟ್ಟಿಯಲ್ಲಿ ಹೆಸರಿಲ್ಲದೆ ಹೋದರೆ, ಮತದಾನದ ಹಕ್ಕು ಮಾತ್ರ ಹೋಗುವುದಿಲ್ಲ. ಪೌರತ್ವವನ್ನೇ ನಿರಾಕರಿಸಿದಂತಾಗುತ್ತದೆ. ಮತ ಪಟ್ಟಿಯಲ್ಲಿ ‘ಮೃತರು’ ಎಂದು ಘೋಷಿತರಾದವರೇ ಸ್ವತಃ ಆಯೋಗದ ಕಚೇರಿಗೆ ಹೋಗಿ ದೂರು ದಾಖಲಿಸಿದ ಘಟನೆಗಳು ಈ ಪರಿಷ್ಕರಣಾ ಕಾರ್ಯದ ಪೊಳ್ಳುತನವನ್ನು ಬಯಲು ಮಾಡಿವೆ’ ಎಂದರು.
ಜಿಲ್ಲಾ ಸಮಿತಿಯ ಸದಸ್ಯ ಮಹೇಶ್ ನಾಡಗೌಡ ಮಾತನಾಡಿ, ‘ದೇಶವ್ಯಾಪಿ ಪ್ರತಿಭಟನಾ ಸಪ್ತಾಹ ಅಂಗವಾಗಿ ಎಸ್‌ಯುಸಿಐ ಪಕ್ಷದಿಂದ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಈ ಕ್ರಮದ ವಿರುದ್ಧ ಜನ ದನಿ ಎತ್ತಬೇಕು’ ಎಂದರು.
ಪಕ್ಷದ ಸದಸ್ಯರಾದ ಗಣಪತರಾವ್ ಕೆ.ಮಾನೆ, ಮಹೇಶ್ ಎಸ್.ಬಿ., ಜಗನ್ನಾಥ್ ಎಸ್.ಎಚ್., ಡಾ.ಸೀಮಾ ದೇಶಪಾಂಡೆ, ಹಣಮಂತ ಎಸ್.ಎಚ್, ಅಶ್ವಿನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.