ADVERTISEMENT

ಕಲಬುರಗಿ | ಬೈಕ್‌ಗೆ ಕ್ರೂಸರ್‌ ಡಿಕ್ಕಿ: ಸ್ಥಳದಲ್ಲೇ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:56 IST
Last Updated 11 ಸೆಪ್ಟೆಂಬರ್ 2025, 4:56 IST
<div class="paragraphs"><p>ವಿಶಾಲ ಮೃತ&nbsp;ಯುವಕ</p></div>

ವಿಶಾಲ ಮೃತ ಯುವಕ

   

ಕಮಲಾಪುರ: ಕ್ರೂಸರ್‌–ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಚೇಂಗಟಾ ಸಮೀಪದ ಅಡಕಿಮೋಕ ತಾಂಡಾ ಬಳಿ ನಡೆದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕ್ರೂಸರ್ ಹಾಯಿಸಿ ಕೊಲೆಗೈಯ್ಯಲಾಗಿದೆ ಎಂದು ಮೃತ ಯುವಕನ ಪಾಲಕರು ರಟಕಲ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅಡಕಿಮೋಕ ತಾಂಡಾದ ವಿಶಾಲ (ಡಿಜೆ ವಿಶಾಲ) ಕಿಶನ ರಾಠೋಡ (22) ಮೃತ ಯುವಕ. ಅನಿತಾಬಾಯಿ ಅಂಬು, ಪಾರ್ಬತಿಬಾಯಿ ಅಂಬು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವಿಶಾಲ ಹಾಗೂ ಅನಿತಾಬಾಯಿ, ಪಾರ್ವತಿಬಾಯಿ ಬೈಕ್‌ನಲ್ಲಿ ಅಡಕಿಮೋಕ ತಾಂಡಾದಿಂದ ಚೇಂಗಟಾ ಗ್ರಾಮಕ್ಕೆ ತೆರಳುತ್ತಿದ್ದರು. ಇದೇ ತಾಂಡಾದ ನಿವಾಸಿ ಕ್ರೂಜರ್ ಚಾಲಕ ಸಿತಾರಾಮ ರಾಠೋಡ ಎದುರಿಗೆ ಬಂದು ಕ್ರೂಸರ್‌ ಹಾಯಿಸಿದ್ದಾನೆ ಎಂದು ಮೃತ ವಿಶಾಲ ತಂದೆ ಕಿಶನ ರಾಠೋಡ ರಟಕಲ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಎರಡು ವರ್ಷಗಳ ಹಿಂದೆ ವಿಶಾಲನ ಭಾವನ ಟಂಟಂ ಪಲ್ಟಿಯಾಗಿತ್ತು. ಅದರಲ್ಲಿ ಸಿತಾರಾಮನ ತಾಯಿ ಶಾಂತಾಬಾಯಿ ಮೃತಪಟ್ಟಿದ್ದಳು. ವಿಶಾಲನ ಕುಟುಂಬಸ್ಥರಿಗೂ ಗಾಯಗಳಾಗಿದ್ದವು. ಆದರೆ, ಸೀತಾರಾಮ ತನ್ನ ತಾಯಿಯನ್ನು ಉದ್ದೇಶಪೂರ್ವಕವಾಗಿ ಕೊಲೆಗೈದಿದ್ದಿರಿ ಎಂದು ಹಗೆ ಸಾಧಿಸುತ್ತಿದ್ದ.

ಅನಿತಾಬಾಯಿ, ಪಾರ್ವತಿಬಾಯಿ ಹಾಗೂ ಇವರ ಪತಿ ಅಂಬು ಜೊತೆಗೆ ಎರಡು ದಿನಗಳಿಂದ ಸೀತಾರಾಮ ಜಗಳ ಮಾಡುತ್ತಿದ್ದ. ಸೀತಾರಾಮನ ಮಗ ಪಾರ್ವತಿಬಾಯಿ ಮಗಳಿಗೆ ಕಿರುಕುಳ ನೀಡುತ್ತಿದ್ದ. ಈ ವಿಷಯಕ್ಕೆ ಜಗಳ ನಡೆದಿತ್ತು. ಅನಿತಾಬಾಯಿ, ಪಾರ್ವತಬಾಯಿ ವಿಶಾಲನ ಬೈಕ್‌ನಲ್ಲಿ ಮಗಳನ್ನು ಭೇಟಿಯಾಗಲು ಚೇಂಗಟಾ ಶಾಲೆಗೆ ತೆರಳುತ್ತಿದ್ದರು. ಕ್ರೂಸರ್ ಚಲಾಸಿಕೊಂಡು ಎದರಿಗೆ ಬಂದ ಸೀತಾರಾಮ, ಉದ್ದೇಶಪೂರ್ವಕವಾಗಿ ಬೈಕ್ ಮೇಲೆ ಹಾಯಿಸಿದ್ದಾನೆ. ವಿಶಾಲನನ್ನು ಕೊಲೆ ಮಾಡುವುದಾಗಿ ಪದೆಪದೆ ಸೀತಾರಾಮ ಬೆದರಿಕೆ ಹಾಕುತ್ತಿದ್ದ ಎಂದು ವಿಶಾಲನ ತಂದೆ ಕಿಶನ ದೂರಿದ್ದಾರೆ. ವಿಶಾಲ ಒಬ್ಬನೇ ಮಗನಾಗಿದ್ದು, ತಂದೆ, ತಾಯಿ ಐವರು ಸಹೋದರಿಯರಿದ್ದಾರೆ.

ಅನಿತಾಬಾಯಿ, ಪಾರ್ವತಿಬಾಯಿ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಟಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‌ಪಿ ಶಂಕರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.