ADVERTISEMENT

ಬಿಜೆಪಿಗೆ ದಲಿತರ ಏಳಿಗೆ ಸಹಿಸಲಾಗುತ್ತಿಲ್ಲ: ರೇವೂ ನಾಯಕ ಬೆಳಮಗಿ

ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೂ ಸಚಿವ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 14:00 IST
Last Updated 4 ಜನವರಿ 2025, 14:00 IST
ರೇವೂ ನಾಯಕ ಬೆಳಮಗಿ
ರೇವೂ ನಾಯಕ ಬೆಳಮಗಿ   

ಕಲಬುರಗಿ: ‘ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಸಂಬಂಧವಿಲ್ಲ. ಆದರೂ ವಿನಾಕಾರಣ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಬಿಜೆಪಿಯವರಿಗೆ ದಲಿತರ ಏಳಿಗೆ ಸಹಿಸಲಾಗುತ್ತಿಲ್ಲ’ ಎಂದು ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕೆ.ಎಸ್‌.ಈಶ್ವರಪ್ಪ ಅವರ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸವಿದೆ. ಈಶ್ವರಪ್ಪ ಪ್ರಕರಣದಲ್ಲಿ ಡೆತ್‌ನೋಟ್‌ನಲ್ಲಿ ಗುತ್ತಿಗೆದಾರ ನೇರವಾಗಿ ಅವರ ಹೆಸರು ಬರೆದಿದ್ದರು. ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರು ಎಂದು ಮಾತ್ರ ಉಲ್ಲೇಖಿಸಲಾಗಿದೆ. ಆದ್ದರಿಂದ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದರು.

‘ಪ್ರಿಯಾಂಕ್‌ ಖರ್ಗೆಯವರು ರಾಜಕೀಯವಾಗಿ ಬೆಳೆಯುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿಗೆ ಇದನ್ನು ಸಹಿಸಲಾಗುತ್ತಿಲ್ಲ. ಆದ್ದರಿಂದ ಅವರ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಇ.ಡಿ ದಾಳಿ ಮಾಡಿಸಿ ಜೈಲಿಗೆ ಕಳುಹಿಸುವ ಮೂಲಕ ಸೇಡಿನ ರಾಜಕಾರಣ ಮಾಡಿದ್ದರು’ ಎಂದು ಹೇಳಿದರು.

ADVERTISEMENT

‘ಪ್ರತಿಭಟಿಸುವುದು ಪ್ರತಿಯೊಬ್ಬರ ಹಕ್ಕು. ಆದರೆ, ಪ್ರಕರಣಕ್ಕೆ ಸಂಬಂಧಿಸದ ಪ್ರಿಯಾಂಕ್ ಖರ್ಗೆ ಹೆಸರು ಎಳೆದು ತರುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ’ ಎಂದರು.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ, ‘ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರದುಷ್ಟಕರ. ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ತನಿಖೆ ಆರಂಭವಾಗಿದೆ. ಮುಗಿದ ಬಳಿಕ ತಪ್ಪಿತಸ್ಥರು ಯಾರು ಎಂದು ಗೊತ್ತಾಗಲಿದೆ. ಅಲ್ಲಿಯವರೆಗೂ ಬಿಜೆಪಿಯವರು ಕಾಯಬೇಕು’ ಎಂದು ಹೇಳಿದರು.

‘ಖರ್ಗೆ ಕುಟುಂಬಕ್ಕೆ ಕಪ್ಪುಮಸಿ ಬಳೆಯಲು ಯತ್ನಿಸುತ್ತಿರುವ ಬಿಜೆಪಿಗೆ ಧಿಕ್ಕಾರವಿರಲಿ. ಇದೇ ರೀತಿ ಮುಂದುವರಿದರೆ ಬಂಜಾರ ಸಮುದಾಯದಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿಠಲ ಜಾಧವ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆಯವರು ದೊಡ್ಡ ನಾಯಕರು. ಅವರ ರಾಜಕೀಯ ಜೀವನ ಇತರರಿಗೆ ಮಾದರಿಯಾಗಿದೆ. ಸುಳ್ಳು ಆರೋಪಗಳ ಮೂಲಕ ಅಂಥ ನಾಯಕರ ಕುಟುಂಬಕ್ಕೆ ಕಳಂಕ ತರಲು ಯತ್ನಿಸುತ್ತಿರುವ ಬಿಜೆಪಿ ನಡೆ ಸರಿಯಲ್ಲ’ ಎಂದರು.

ಮುಖಂಡರಾದ ಅರವಿಂದ ಚವಾಣ್, ಪ್ರೇಮಕುಮಾರ ರಾಠೋಡ ಇದ್ದರು.

ಸುಭಾಷ ರಾಠೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.