ADVERTISEMENT

‘600ರಲ್ಲಿ ಕೇವಲ 51 ಭರವಸೆ ಈಡೇರಿಸಿದ ಬಿಜೆ‍ಪಿ’

ಶಾಸಕ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 14:01 IST
Last Updated 2 ಫೆಬ್ರುವರಿ 2023, 14:01 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನೀಡಿದ್ದ 600 ಭರವಸೆಗಳ ಪೈಕಿ ಕೇವಲ 51 ಭರವಸೆಗಳನ್ನು ಮಾತ್ರ ಈಡೇರಿಸಿದೆ ಎಂದು ಶಾಸಕ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ನೀಡಲಾದ 112 ಭರವಸೆಗಳ ಪೈಕಿ 15 ಭರವಸೆಗಳನ್ನು ಮಾತ್ರ ಈಡೇರಿಸಿದೆ. ಮಹಿಳೆಯರಿಗೆ ಸಂಬಂಧಿಸಿದಂತೆ 26 ಭರವಸೆಗಳ ಪೈಕಿ 2ನ್ನು ಮಾತ್ರ ಈಡೇರಿಸಿದೆ. ಉತ್ತಮ ಆಡಳಿತ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ 18ರ ಪೈಕಿ 1 ಭರವಸೆಯನ್ನು ಮಾತ್ರ ಈಡೇರಿಸಿದೆ’ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುನ್ನ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿತ್ತು.

ADVERTISEMENT

‘ಗೋ ರಕ್ಷಣೆಗಾಗಿ ಕಾಮಧೇನು ಎಂಬ ಯೋಜನೆಯನ್ನು ಜಾರಿಗೆ ತರವುದಾಗಿ ಹೇಳಿತ್ತು. ಈ ಬಗ್ಗೆ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸರ್ಕಾರ ಅಂತಹ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ ಎಂದು ಹೇಳಿದೆ. ಗೋವಿನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಈ ಯೋಜನೆ ಜಾರಿ ಮಾಡದಿದ್ದರೆ ಹೇಗೆ’ ಎಂದು ವ್ಯಂಗ್ಯವಾಡಿದರು.

‘ಗೋವುಗಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನು ಒತ್ತಾಯಪೂರ್ವಕವಾಗಿ ನೌಕರರ ಮೇಲೆ ಹೇರಿ ಸರ್ಕಾರಿ ನೌಕರರಿಂದ ಬಲವಂತವಾಗಿ ₹ 40 ಕೋಟಿ ವಸೂಲಿ ಮಾಡಿದೆ. ಒಬ್ಬ ಬಿಜೆಪಿ ಶಾಸಕನಾದರೂ ಗೋವುಗಳನ್ನು ದತ್ತು ತೆಗೆದುಕೊಳ್ಳಲು ಹಣ ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ನಮ್ಮ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗೆ ವಿರುದ್ಧವಾಗಿ ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದರು. ಜಿಲ್ಲಾ ಕೇಂದ್ರಗಳಲ್ಲಿ ತಲಾ ಮೂರು ಹಾಗೂ ತಾಲ್ಲೂಕು ಕೇಂದ್ರದಲ್ಲಿ ಒಂದೊಂದು ಕ್ಯಾಂಟೀನ್ ತೆರೆಯುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಬಗ್ಗೆ ಲಿಖಿತ ಪ್ರಶ್ನೆ ಕೇಳಿದಾಗ ಅಂತಹ ಯೋಜನೆ ಜಾರಿಯಾಗಿಲ್ಲ ಎಂದು ತಿಳಿಸಿದ್ದಾರೆ. ಇವರಿಗೆ ಬಡವರ ಹಸಿವು ತಣಿಸುವ ಇಚ್ಛಾಶಕ್ತಿ ಇಲ್ಲವೇ’ ಎಂದರು.

ನರೇಗಾ ಅನುದಾನದಲ್ಲಿ ಕಡಿತವೇಕೆ?

ಕೋವಿಡ್ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಹಂಚಿಕೆ ಮಾಡುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ಈ ಬಾರಿ ₹ 38 ಸಾವಿರ ಕೋಟಿ ಕಡಿತ ಮಾಡಿದೆ. ಕಳೆದ ವರ್ಷ 98,468 ಕೋಟಿ ಹಂಚಿಕೆಯಾಗಿದ್ದರೆ ಈ ಬಾರಿ ₹ 60 ಸಾವಿರ ಕೋಟಿ ಹಂಚಿಕೆ ಮಾಡಿದೆ. ಇದೇನಾ ಇವರ ಬಡವರ ಪರವಾದ ಧೋರಣೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಸಬ್ಸಿಡಿಗೆ ಕೇವಲ ₹ 2 ಸಾವಿರ ಕೋಟಿ ತೆಗೆದಿರಿಸಿದ್ದಾರೆ. ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ₹ 2.25 ಲಕ್ಷ ಕೋಟಿಯಿಂದ ₹ 1.75 ಲಕ್ಷ ಕೋಟಿಗೆ ಕಡಿತ ಮಾಡಿದ್ದರಿಂದ ರೈತರು ದುಬಾರಿ ದರ ತೆತ್ತು ರಸಗೊಬ್ಬರ ಖರೀದಿ ಮಾಡಬೇಕಾಗುತ್ತದೆ.

ಒಟ್ಟಾರೆ ಬಿಜೆಪಿ ಸರ್ಕಾರ ರೈತರು, ಬಡವರ, ಮಹಿಳೆಯರ ವಿರೋಧಿಯಾಗಿದೆ. ಉದ್ಯೋಗ ಸೃಷ್ಟಿಯ ಬಗ್ಗೆಯೂ ಒಂದು ಮಾತು ಆಡಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.