ADVERTISEMENT

ಪೇಸಿಎಂ ಕಾಂಗ್ರೆಸ್‌ಗೆ ತಿರುಗುಬಾಣ: ಬಿ.ವೈ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:58 IST
Last Updated 30 ಸೆಪ್ಟೆಂಬರ್ 2022, 3:58 IST
ವಿಜಯೇಂದ್ರ
ವಿಜಯೇಂದ್ರ   

ಕಲಬುರಗಿ: ‘ಅಧಿಕಾರದಿಂದ ದೂರ ಉಳಿದ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪೇಸಿಂಎ ತಂತ್ರಗಾರಿಕೆ ಮುಂದಿನ ದಿನ ಅವರಿಗೆಯೇ ತಿರುಗು ಬಾಣವಾಗಲಿದ್ದು, ಜನರು ಯುಪಿಎ ಅವಧಿಯ ಹಗರಣಗಳನ್ನು ಮರೆತಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಅವರು ಏನೇ ಬೊಬ್ಬೆ ಹೊಡೆದರೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಆಗುವುದಿಲ್ಲ. ಪ್ರಚಾರದ ವ್ಯಾಮೋಹದಿಂದ ಶುರುಮಾಡಿದ ಪೇಸಿಎಂ ತಂತ್ರಗಾರಿಕೆ ತಿರುಗುಬಾಣ ಆಗುವುದು ಖಚಿತ’ ಎಂದರು.

‘ಕಾಂಗ್ರೆಸ್ ಪಕ್ಷದ ಪುಡಾರಿಗಳ ಪೈಕಿ ಯಾರೋ ಅವರ ನಾಯಕರ ಫ್ಲೆಕ್ಸ್ ಹರಿದು ಹಾಕಿರಬೇಕು.ಬಿಜೆಪಿ ಇಂತಹ ಕೀಳುಮಟ್ಟಕ್ಕೆ ಇಳಿಯುವುದಿಲ್ಲ. ಒಬ್ಬ ರಾಷ್ಟ್ರೀಯ ಅಧ್ಯಕ್ಷರೂ ಸಿಗದಕಾಂಗ್ರೆಸ್ ಪಕ್ಷ ಅಡ್ರೆಸ್ ಕಳೆದುಕೊಂಡಿದೆ. ಅದನ್ನು ಹುಡುಕವುದಕ್ಕಾಗಿ ಸಂಸದ ರಾಹುಲ್‌ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಪಕ್ಷ ಕೊಟ್ಟ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುತ್ತೇನೆ. ನಮ್ಮ ತಂದೆ ನನ್ನನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಯಾವತ್ತು ಒತ್ತಡ ಹಾಕಿಲ್ಲ, ಹಾಕುವುದೂ ಇಲ್ಲ. ಯಡಿಯೂರಪ್ಪ ಅವರ ಮಗನ ಹಣೆಯ ಬರಹದಲ್ಲಿ ಏನು ಬರೆದಿದೆಯೋ ಅದನ್ನು ಯಾರು ತಪ್ಪಿಸುವುದಕ್ಕೆ ಆಗುವುದಿಲ್ಲ’ ಎಂದು ಚುನಾವಣೆ ಸ್ಪರ್ಧೆಯ ಪ್ರಶ್ನೆಗೆ ಉತ್ತರಿಸಿದರು. ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ, ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ್, ಅರುಣಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.