ರಾಜಕುಮಾರ ಪಾಟೀಲ ತೆಲ್ಕೂರ
ಕಲಬುರಗಿ: ‘ಸಿದ್ದಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯಿಂದ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಭಾವ ಬೀರಿ 5 ಎಕರೆ ಜಮೀನು ಪಡೆದಿದ್ದಾರೆ’ ಎಂದು ಮಾಜಿ ಶಾಸಕ ರಾಜಶೇಖರ ಪಾಟೀಲ ತೇಲ್ಕೂರ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ 377 ಎಕರೆಗೂ ಹೆಚ್ಚು ಜಮೀನು ಕೆಐಎಡಿಬಿಯಿಂದ ದಲಿತ ಸಮುದಾಯಕ್ಕೆ ಹಂಚಿಕೆಗಾಗಿ ಮೀಸಲಿಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಹಂಚಿಕೆ ಮಾಡಲು ಆಸಕ್ತಿ ತೋರದೇ ತರಾತುರಿಯಲ್ಲಿ ಬೆಂಗಳೂರಿನಲ್ಲಿ ಉದ್ಯಮಕ್ಕಾಗಿ ಮೀಸಲಿಟ್ಟ ಸ್ಥಳದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಟುಂಬಕ್ಕೆ ಕಾನೂನು ಮೀರಿ ಜಮೀನು ನೀಡಿದೆ‘ ಎಂದು ಹೇಳಿದರು.
ಜಮೀನು ಮಂಜೂರಾತಿಗೆ ಅರ್ಜಿ ಕರೆಯಲು 30 ದಿನಗಳ ನೋಟಿಸ್ ಕೊಡಬೇಕು. ಆದರೆ ರಾಜ್ಯ ಸರ್ಕಾರ 14 ದಿನಗಳ ನೋಟಿಸ್ ಕೊಟ್ಟಿದೆ. ನೋಟಿಸ್ ಕೂಡ ಬಹಿರಂಗವಾಗಿಲ್ಲ, ಗೋಪ್ಯವಾಗಿ ಇಟ್ಟಿದ್ದಾರೆ. ಟ್ರಸ್ಟ್‌ನಲ್ಲಿ ಜನಪ್ರತಿನಿಧಿಗಳು ಇರಬಾರದು. ನೀವು ಸಚಿವರಾಗಿ ಟ್ರಸ್ಟ್‌ನಲ್ಲಿ ಇದ್ದೀರಿ. ಅದನ್ನು ಹರಾಜು ಕರೆದು ಜಾಸ್ತಿ ಬಿಡ್ ಮಾಡಿದವರಿಗೆ ಜಾಗ ಕೊಡಬೇಕು. ಕಾಂಗ್ರೆಸ್ ಸರ್ಕಾರ ತಮ್ಮ ಮಂತ್ರಿಗಳಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದೆ. ಸಚಿವರು ಪ್ರಭಾವ ಬೀರಿ ಜಮೀನು ಪಡೆದಿದ್ದಾರೆ’ ಎಂದು ಆರೋಪಿಸಿದರು.
ಇನ್ನು ಪ್ರಕರಣ ಬೆಳಕಿಗೆ ತಂದ ಛಲವಾದಿ ನಾರಾಯಣಸ್ವಾಮಿಯವರ ಬಗ್ಗೆ ಸಚಿವ ಎಂ.ಬಿ .ಪಾಟೀಲ, ಯು.ಬಿ.ವೆಂಕಟೇಶ ಅವರು ಕೀಳಾದ ಪದಬಳಕೆ ಮಾಡಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.
‘ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.