ಕಲಬುರಗಿಯಲ್ಲಿ ಶನಿವಾರ ನಡೆದ ಕಲಬುರಗಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು
ಕಲಬುರಗಿ: ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ದಿಗ್ಬಂಧನ ಘಟನೆ ಖಂಡಿಸಿ ಹಾಗೂ ಮೂರು ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಬಿಜೆಪಿ ನಾಯಕರು ಕಲಬುರಗಿ ಚಲೋ ಪ್ರತಿಭಟನೆ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ನಾರಾಯಣಸ್ವಾಮಿ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಸ್ವಾಮಿ ಅವರನ್ನು ಚಿತ್ತಾಪುರ ಅತಿಥಿಗೃಹದಲ್ಲಿ ಐದಾರು ಗಂಟೆ ದಿಗ್ಬಂಧನದಲ್ಲಿ ಇರಿಸಿದ್ದರು. ಇದನ್ನು ಖಂಡಿಸಿ ಬಿಜೆಪಿ ನಾಯಕರು ಕಲಬುರಗಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
'ದುಷ್ಟತೆಗೆ ಕಲಬುರಗಿ ನೆಲವಲ್ಲ', 'ಸಂವಿಧಾನ ವಿರೋಧಿ ನಡೆ ಸಹಿಸಲ್ಲ', 'ಪ್ರಿಯಾಂಕ್ ಖರ್ಗೆ ದೌರ್ಜನ್ಯ ಕೊನೆಗಾಣಿಸೋಣ' ಎಂಬ ನಾಮಫಲಕಗಳನ್ನು ಹಿಡಿದು ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಕಲಬುರಗಿಯನ್ನು ರಿಪಬ್ಲಿಕ್ ಮಾಡಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು, ಪ್ರಿಯಾಂಕ್ ಖರ್ಗೆ ಅವರ ಆಣತಿಯಂತೆ ಕೆಲಸ ಮಾಡುತ್ತಿರುವ ಎಲ್ಲ ಪೊಲೀಸರನ್ನು ಅಮಾನತು ಮಾಡಬೇಕು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿದ ಪ್ರಕರಣವನ್ನು ವಾಪಸ್ ಪಡೆಯಬೇಕು ಹಾಗೂ ನಾರಾಯಣಸ್ವಾಮಿ ಅವರಿಗೆ ದಿಗ್ಬಂಧನದಲ್ಲಿ ಇರಿಸಿ ಕಿರುಕುಳ ಕೊಟ್ಟಿರುವ ಕುರಿತು ನ್ಯಾಯಾಂಗ ತನಿಖೆ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ಗೋವಿಂದ ಕಾರಜೋಳ, ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸಿಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಶಶೀಲ್ ಜಿ. ನಮೋಶಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಜಾಧವ, ಮುಖಂಡರಾದ ಶ್ರೀರಾಮುಲು, ನಿತಿನ್ ಗುತ್ತೇದಾರ, ಚಂದು ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಅಶೋಕ ಬಗಲಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.