ADVERTISEMENT

ಚಿತ್ತಾಪುರ | ಮಣಿಕಂಠ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ: ಬಿಗಿ ಪೊಲೀಸ್ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 7:36 IST
Last Updated 28 ಆಗಸ್ಟ್ 2023, 7:36 IST
ಚಿತ್ತಾಪುರ ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಅಂಗವಾಗಿ ಬಂದೋಬಸ್ತ್‌ಗೆ ನಿಯೋಜನೆಗೊಂಡ ಪೊಲೀಸರು
ಚಿತ್ತಾಪುರ ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಅಂಗವಾಗಿ ಬಂದೋಬಸ್ತ್‌ಗೆ ನಿಯೋಜನೆಗೊಂಡ ಪೊಲೀಸರು   

ಚಿತ್ತಾಪುರ: ತಾಲ್ಲೂಕಿನ ಕಲಗುರ್ತಿ ಗ್ರಾಮದಲ್ಲಿ ದೇವಾನಂದ ರಾಮಚಂದ್ರ ಕೋರಬಾ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಧ್ವನಿ ಎತ್ತಿ, ಪೊಲೀಸರ ವಿರುದ್ಧ ಸುಳ್ಳು ಮಾಹಿತಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಬಂಧನ ಖಂಡಿಸಿ ಬಿಜೆಪಿಯ ಕಾರ್ಯಕರ್ತರು ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಳೆದ ಶುಕ್ರವಾರ ಮಾಡಬೂಳ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಅವರು ಮಣಿಕಂಠ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಮಣಿಕಂಠ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು.

ಮಣಿಕಂಠ ಅವರ ಬಂಧನ ಖಂಡಿಸಿ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸರ ವಿರುದ್ಧ ಗುಡುಗಿದ್ದರು. ಹೀಗಾಗಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಪಟ್ಟಣದ ತುಂಬ ಬಿಗಿ ಬಂದೋಬಸ್ತ್ ಮಾಡಿರುವುದು ಕಂಡು ಬಂತು.

ADVERTISEMENT

ಬಂದೋಬಸ್ತ್ ವ್ಯವಸ್ಥೆ ನಿರ್ವಹಣೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಇಶಾ ಪಂತ್, ಹೆಚ್ಚುವರಿ ಎಸ್.ಪಿ ಶ್ರೀನಿಧಿ ಅವರು ಚಿತ್ತಾಪುರಕ್ಕೆ ಬಂದಿದ್ದಾರೆ.

ಕಲಗುರ್ತಿ ಗ್ರಾಮದ ದೇವಾನಂದನ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದೆ ರಕ್ಷಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ವಿರುದ್ಧವೇ ಗಂಭೀರ ಆರೋಪ ಮಾಡಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.