ADVERTISEMENT

ದೇವೇಂದ್ರಪ್ಪ, ಮಜರ್‌ಗೆ ಒಲಿದ ಹುದ್ದೆ

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಅರಸು ಟ್ರಕ್ ಟರ್ಮಿನಲ್ ನಿಗಮ ಜಿಲ್ಲೆಯವರ ಪಾಲು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 4:57 IST
Last Updated 1 ಮಾರ್ಚ್ 2024, 4:57 IST
ದೇವೇಂದ್ರಪ್ಪ ಮರತೂರ
ದೇವೇಂದ್ರಪ್ಪ ಮರತೂರ   

ಕಲಬುರಗಿ: ಮೊದಲ ಪಟ್ಟಿಯಲ್ಲಿ ಶಾಸಕಿ ಕನೀಜ್ ಫಾತಿಮಾ ಅವರಿಗೆ ಹುದ್ದೆ ನೀಡಿದ್ದ ರಾಜ್ಯದ ಕಾಂಗ್ರೆಸ್
ಸರ್ಕಾರ ಎರಡನೇ ನಿಗಮ–ಮಂಡಳಿಗಳ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ದೇವೇಂದ್ರಪ್ಪ ಮರತೂರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಮಜರ್ ಆಲಂ ಖಾನ್ ಅವರಿಗೆ ಸ್ಥಾನ ಸಿಕ್ಕಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರಾದ ದೇವೇಂದ್ರಪ್ಪ ಅವರಿಗೆ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಮಜರ್ ಖಾನ್ ಅವರಿಗೆ ದೇವರಾಜ ಅರಸು ಟ್ರಕ್ ಟರ್ಮಿನಲ್‌ ನಿಗಮಗಳ
ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಜಿಲ್ಲೆಯಿಂದ ಇನ್ನೂ ಇಬ್ಬರು, ಮೂವರು
ಆಕಾಂಕ್ಷಿಗಳಿದ್ದರೂ ಅವರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಆದಾಗ್ಯೂ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಾಡಾ ಅಧ್ಯಕ್ಷ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇವುಗಳಿಗೂ ಜಿಲ್ಲೆಯವರಿಗೆ ಮಣೆ ಹಾಕುವ ಸಾಧ್ಯತೆಗಳಿವೆ
ಎನ್ನಲಾಗಿದೆ.

ADVERTISEMENT

ದೇವೇಂದ್ರಪ್ಪ ಮರತೂರ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಇಎಸ್‌ಐ ನಿರ್ದೇಶಕರಾಗಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ, ಕೆಪಿಸಿಸಿ ಪ್ರಧಾನ
ಕಾರ್ಯದರ್ಶಿಯಾಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, 10 ವರ್ಷ ಒಬಿಸಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಹುದ್ದೆ ಒಲಿದ ಬಂದ ಬಳಿಕ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಅವರ ಕೃಪೆಯಿಂದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಬಡವರಿಗೆ ಕುರಿ ಸಾಕಣೆಗೆ ಅಗತ್ಯವಾದ ಪ್ರೋತ್ಸಾಹವನ್ನು ನಿಗಮದಿಂದ ಮಾಡಲು ಶ್ರಮಿಸುತ್ತೇನೆ‘ ಎಂದರು. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಮಜರ್ ಆಲಂ ಖಾನ್ ಅವರನ್ನು ‘ಪ್ರಜಾವಾಣಿ‘ ಸಂಪರ್ಕಿಸಿದಾಗ, ‘ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಹೇಳಿಕೆ ನೀಡುತ್ತೇನೆ‘ ಎಂದು
ಪ್ರತಿಕ್ರಿಯಿಸಿದರು.

ಮಜರ್ ಖಾನ್
ಬನ್ನೂರು ತಳಿಯ ಕುರಿಗಳನ್ನು ಕಲ್ಯಾಣ ಕರ್ನಾಟಕದಲ್ಲಿ ಸಾಕಲು ಅನುಗುವಾಗುವಂತೆ ಕ್ರಮ ಕೈಗೊಳ್ಳುವೆ. ಸೋಮವಾರ ನಿಗಮದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವೆ.
-ದೇವೇಂದ್ರಪ್ಪ ಮರತೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.